ವಿಜಯಪುರ: ಇಲ್ಲಿನ ರಾಜಗುರು ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಮೆಕ್ಕೆ ಜೋಳ ಮೂಟೆ ತುಂಬುವ ಯಂತ್ರ ಕುಸಿದು, ಮೂವರು ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಇಂಡಸ್ಟ್ರೀಸ್ನ ಗೋದಾಮಿನಲ್ಲಿ ಈ ದುರಂತ ಸಂಭವಿಸಿದೆ.
ರಾಜೇಶ್ ಮುಖಿಯಾ(25), ರಾಮ್ರೀಜ್ ಮುಖಿಯಾ(29), ಶಂಭು ಮುಖಿಯಾ(26) ಮೃತ ಕಾರ್ಮಿಕರು. ಅವಶೇಷಗಳ ಅಡಿಯಲ್ಲಿ ಇನ್ನೂ 6-7 ಮಂದಿ ಸಿಲುಕಿದ್ದು, ಮೃತಪಟ್ಟಿರುವ ಶಂಕೆಯೂ ವ್ಯಕ್ತವಾಗಿದೆ. ಎಸ್ಡಿಆರ್ಎಫ್ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಮೃತ ಕಾರ್ಮಿಕರೆಲ್ಲರೂ ಬಿಹಾರ ಮೂಲದವರು ಎಂದು ಗುರುತಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಆ ಕಾರ್ಮಿಕರು ಇದೇ ಇಂಡಸ್ಟ್ರೀಜ್ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಅವಶೇಷಗಳ ಅಡಿ ಸಿಲುಕಿರುವ ಕಾರ್ಮಿಕರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ರಾತ್ರಿಯಿಂದಲೂ 4 ಜೆಸಿಬಿಗಳ ಮೂಲಕ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಸ್ಥಳದಲ್ಲಿ ಕಾರ್ಮಿಕರು, ಅವರ ಸಂಬಂಧಿಕರು ಗುಂಪುಗೂಡಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಸ್ಥಳದಲ್ಲೇ ಬೀಡುಬಿಟ್ಟು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವೈದ್ಯರ ತಂಡವೂ ಕಾರ್ಮಿಕರಿಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.