IND vs AUS, 4th T20I: ಆಸೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ರಾಯ್ಪುರ್‌: ಇಲ್ಲಿ ನಡೆದ ನಾಲ್ಕನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 20 ರನ್‌ಗಳ ಜಯ ಸಾಧಿಸಿತು. 3-1 ಅಂತರದಿಂದ ಸರಣಿಯನ್ನು ಭಾರತ ತನ್ನ ಕೈವಶ ಮಾಡಿಕೊಂಡಿತು. ಟಾಸ್‌ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತು. ಟೀಂ ಇಂಡಿಯಾ 9 ವಿಕೆಟ್‌ ನಷ್ಟಕ್ಕೆ 174 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. 175 ರನ್‌ ಗುರಿ ಬೆನ್ನತ್ತಿದ ಆಸೀಸ್‌ 20 ಓವರ್‌ಗೆ 7 ವಿಕೆಟ್‌ ನಷ್ಟಕ್ಕೆ 154 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಆರಂಭಿಕರಾಗಿ ಕಣಕ್ಕಿಳಿದಿದ್ದ ಟ್ರಾವಿಸ್‌ ಹೆಡ್‌ ಮತ್ತು ಜೋಶ್‌ ಫಿಲಿಪ್‌ ಉತ್ತಮ ಇನ್ನಿಂಗ್ಸ್‌ ಕಟ್ಟಲು ಪ್ರಯತ್ನಿಸಿದರು. ಆರಂಭದಲ್ಲೇ ಹೊಡಿಬಡಿ ಆಟದೊಂದಿಗೆ ಮಿಂಚಿದ ಹೆಡ್‌ 16 ಬಾಲ್‌ಗೆ 31 ರನ್‌ (5 ಫೋರ್‌, 1 ಸಿಕ್ಸ್‌) ಬಾರಿಸಿದರು. ಈ ಗ್ಯಾಪ್‌ನಲ್ಲಿ ಫಿಲಿಪ್‌ ಕೇವಲ 8 ರನ್‌ ಗಳಿಸಿ ಔಟಾದರು. ನಂತರ ಯಾವೊಬ್ಬ ಬ್ಯಾಟರ್‌ ಕೂಡ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೆಡ್‌ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್‌ ಇತ್ತರು.

ಬೆನ್ ಮೆಕ್ಡರ್ಮಾಟ್ (19), ಆರನ್ ಹಾರ್ಡಿ (8), ಟಿಮ್ ಡೇವಿಡ್(19), ಮ್ಯಾಥ್ಯೂ ಶಾರ್ಟ್ (22), ಬೆನ್ ದ್ವಾರ್ಶುಯಿಸ್ (1) ಪೆವಿಲಿಯನ್‌ ಪರೇಡ್‌ ನಡೆಸಿದರು. ಮ್ಯಾಥ್ಯೂ ವೇಡ್ (36) ತಂಡವನ್ನು ಗೆಲಿಸಲು ಶ್ರಮಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ 20 ಓವರ್‌ಗೆ 7 ವಿಕೆಟ್‌ ನಷ್ಟಕ್ಕೆ ಆಸ್ಟ್ರೇಲಿಯಾ 154 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಭಾರತ ಪರ ಅಕ್ಷರ್‌ ಪಟೇಲ್‌ 3 ವಿಕೆಟ್‌ ಕಿತ್ತು ಮಿಂಚಿದರು. ದೀಪಕ್ ಚಹಾರ್ 2, ರವಿ ಬಿಷ್ಣೋಯ್ ಹಾಗೂ ಅವೇಶ್ ಖಾನ್ ತಲಾ 1 ವಿಕೆಟ್‌ ಪಡೆದರು.ಇದಕ್ಕೂ ಮೊದಲು ಭಾರತಕ್ಕೆ ಯಶಸ್ವಿ ಜೈಸ್ವಾಲ್‌ (37) ಹಾಗೂ ಋತುರಾಜ್‌ ಗಾಯಕ್‌ವಾಡ್‌ (32) ಉತ್ತಮ ಇನ್ನಿಂಗ್ಸ್‌ ಆರಂಭಿಸಿದ್ದರು. ಮೊದಲ ವಿಕೆಟ್‌ಗೆ 50 ರನ್‌ಗಳ ಜೊತೆಯಾಟ ಕಟ್ಟಿದ್ದರು. ಆದರೆ ಜೈಸ್ವಾಲ್‌ ವಿಕೆಟ್‌ ಪತನದೊಂದಿಗೆ ಭಾರತ ಹಿನ್ನಡೆ ಅನುಭವಿಸಿತು. ಶ್ರೇಯಸ್‌ ಅಯ್ಯರ್‌ (8), ನಾಯಕ ಸೂರ್ಯಕುಮಾರ್‌ ಯಾದವ್‌ (1) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು.

ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್‌ ಹಾಗೂ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ಉಪಯುಕ್ತ ರನ್‌ ಕಾಣಿಕೆ ನೀಡಿದರು. ಆ ಮೂಲಕ ತಂಡವನ್ನು ಸವಾಲಿನ ಮೊತ್ತದತ್ತ ಕೊಂಡೊಯ್ದರು. ಕೊನೆ ಓವರ್‌ನಲ್ಲಿ ಔಟ್‌ ಆದ ರಿಂಕು ಸಿಂಗ್‌ 29 ಎಸೆತಕ್ಕೆ 46 (4 ಬೌಂಡರಿ, 2 ಸಿಕ್ಸರ್‌) ಗಳಿಸಿ ಅರ್ಧಶತಕ ವಂಚಿತರಾದರು. ಜಿತೇಶ್‌ 19 ಎಸೆತಕ್ಕೆ 35 ರನ್‌ (3 ಸಿಕ್ಸರ್‌, 1 ಬೌಂಡರಿ) ಗಳಿಸಿದರು. ಆಸ್ಟ್ರೇಲಿಯಾ ಪರ ಬೆನ್‌ ಡ್ವಾರ್ಶುಯಿಸ್‌ ಮೂರು, ಜೇಸನ್‌ ಬೆಹ್ರೆನ್‌ಡಾರ್ಫ್‌ ಹಾಗೂ ತನ್ವೀರ್‌ ಸಂಘ ತಲಾ 2 ವಿಕೆಟ್‌ ಕಬಳಿಸಿದರು.

 

Loading

Leave a Reply

Your email address will not be published. Required fields are marked *