ನವದೆಹಲಿ:- ಜನರಿಗೆ ನಮ್ಮ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.ಈ ಸಂಬಂಧ ಮಾತನಾಡಿದ ಅವರು,ಕಳೆದ ಹತ್ತು ವರ್ಷಗಳಲ್ಲಿ ತಾವು ಮಾಡಿರುವ ಕೆಲಸಗಳು, ತಮ್ಮ ನೇತೃತ್ವದ ಸರ್ಕಾರದಲ್ಲಿ ಜನರಿಗೆ ಅಪಾರ ವಿಶ್ವಾಸ ಮೂಡಲು ಕಾರಣವಾಗಿದೆ ಎಂದರು.
ಬಡವರು, ಯುವಕರು, ಮಹಿಳೆಯರು ಮತ್ತು ರೈತರು ತಮ್ಮ ಪಾಲಿಗೆ ನಾಲ್ಕು ಅತಿದೊಡ್ಡ ಜಾತಿಗಳು, ಅವರನ್ನು ಮೇಲಕ್ಕೆ ತಂದರೆ ಭಾರತವು ಅಭಿವೃದ್ಧಿ ಹೊಂದುತ್ತದೆ ಎಂದು ಮೋದಿ ಹೇಳಿದರು.
ಈ ‘ಯಾತ್ರೆ’ಯ ಭಾಗವಾಗಿ ಸರ್ಕಾರದ ‘ರಥ’ಗಳು ದೇಶದ ಹಲವೆಡೆ ಪ್ರಯಾಣ ಬೆಳೆಸಲಿವೆ. ಕೆಲವರು ಈ ‘ರಥ’ಗಳನ್ನು ‘ಮೋದಿ ಅವರ ಗ್ಯಾರಂಟಿಗಳು ಇರುವ ಗಾಡಿ’ ಎಂದು ಬಣ್ಣಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ‘ಮೋದಿ ಅವರು ಭರವಸೆಗಳನ್ನು ಈಡೇರಿಸುತ್ತಾರೆ ಎಂಬುದು ಜನ ಸಮೂಹಕ್ಕೆ ಗೊತ್ತಿದೆ’ ಎಂದು ಹೇಳಿದರು.
ಹಿಂದಿನ ಸರ್ಕಾರಗಳು ಊಳಿಗಮಾನ್ಯ ಧೋರಣೆ ಹೊಂದಿದ್ದುದನ್ನು ಜನರು ಕಂಡಿದ್ದಾರೆ. ಈ ಧೋರಣೆಯ ಕಾರಣದಿಂದಾಗಿಯೇ ಸ್ವಾತಂತ್ರ್ಯ ದೊರೆತ ದಶಕಗಳ ನಂತರವೂ ದೇಶದ ಜನರಲ್ಲಿ ಒಂದು ದೊಡ್ಡ ವರ್ಗವು ಮೂಲಸೌಕರ್ಯಗಳಿಂದ ವಂಚಿತವಾಗಿತ್ತು’ ಎಂದು ಮೋದಿ ದೂರಿದರು.
ಸರ್ಕಾರದ ಪ್ರಮುಖ ಯೋಜನೆಗಳು ಅರ್ಹರಿಗೆಲ್ಲರಿಗೂ ತಲುಪುವಂತೆ ಆಗಬೇಕು ಎಂಬ ಉದ್ದೇಶದಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ದೇಶದಾದ್ಯಂತ ಆರಂಭಿಸಲಾಗಿದೆ ಎಂದು ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ.