ನವದೆಹಲಿ: ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಡೀಪ್‌ಫೇಕ್ (Deepfake) ಹಾವಳಿಯನ್ನು ಪರಿಶೀಲಿಸಲು ಮತ್ತು ಆನ್‌ಲೈನ್‌ನಲ್ಲಿ ನಕಲಿ ವಿಷಯವನ್ನು ಪತ್ತೆಹಚ್ಚಿದಾಗ ನಾಗರಿಕರು ದೂರು ದಾಖಲಿಸಲು ಸಹಾಯ ಮಾಡಲು ಸರ್ಕಾರವು ವಿಶೇಷ ಅಧಿಕಾರಿಗಳ ತಂಡವನ್ನು ನಿಯೋಜಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಹೇಳಿದ್ದಾರೆ.
ಡೀಪ್‌ಫೇಕ್ ವಿಡಿಯೋಗಳು ಅಂತರ್ಜಾಲದಲ್ಲಿ ಹೆಚ್ಚಿದ ಬಳಿಕ ಅದ ನಿಂಯತ್ರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇಂದಿನಿಂದ MeitY ಮತ್ತು ಭಾರತ ಸರ್ಕಾರವು ಸಮಸ್ಯೆ ಪರಿಹರಿಸಲು ಏಳು ಅಧಿಕಾರಿಗಳನ್ನು ನಾಮನಿರ್ದೇಶನ ಮಾಡುತ್ತದೆ. ಎಲ್ಲಾ ಪ್ಲಾಟ್ ಫಾರ್ಮ್ ಗಳಿಂದ 100% ಇದು ಮೇಲ್ವಿಚಾರಣೆ ಮಾಡಲಿದೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಅಧಿಕಾರಿಗಳ ನಿಯೋಜನೆಯಿಂದ ನಾಗರಿಕರು ದೂರುಗಳು ಅಥವಾ ಕಾನೂನು ಉಲ್ಲಂಘನೆಯ ಘಟನೆಗಳನ್ನು ಸರ್ಕಾರದ ಗಮನಕ್ಕೆ ತರಲು ಬಹಳ ಸುಲಭವಾಗುತ್ತದೆ. ಏಳು ಅಧಿಕಾರಿಗಳು ದೂರಿನ ಅನ್ವಯ ಡಿಜಿಟಲ್ ಪ್ಲಾಟ್‌ಫಾರ್ಮ್ ಮಾಹಿತಿಯನ್ನು ತೆಗೆದುಕೊಂಡು ಸಮಸ್ಯೆಗೆ ಅನುಗುಣವಾಗಿ ಪ್ರತಿಕ್ರಿಯಿಸುತ್ತಾರೆ.
ಭಾರತದ ಐಟಿ ಕಾನೂನು ಹಳೆಯದಾಗಿದ್ದು, ಡೀಪ್‌ಫೇಕ್ ಅನ್ನು ಎದುರಿಸಲು ಹೊಸ ನಿಯಮಗಳ ಸೇರ್ಪಡೆ ಬಗ್ಗೆ ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಒತ್ತಿ ಹೇಳಲಾಗಿದೆ. ಮಕ್ಕಳ ಲೈಂಗಿಕ ನಿಂದನೆ ಸೇರಿದಂತೆ ಭಾರತೀಯ ಇಂಟರ್ನೆಟ್‌ನಲ್ಲಿ ನಿಷೇಧಿಸಲಾದ ಹಲವಾರು ಇತರ ವರ್ಗಗಳ ವಿಷಯವನ್ನು ನಿರ್ಬಂಧಿಸುವ ಬಗ್ಗೆ ಚರ್ಚಿಸಿದೆ ಎಂದು ಸಚಿವರು ತಿಳಿಸಿದರು.