ಬೆಂಗಳೂರು: ಬಳ್ಳಾರಿಯ ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನಿಂದ ಪ್ರೀತಿ ಹೆಸರಲ್ಲಿ ವಂಚನೆಯ ಆರೋಪ ಕೇಳಿಬಂದಿದೆ. ಎಂಪಿ ದೇವೆಂದ್ರಪ್ಪ ಅವರ ಮಗನ ವಿರುದ್ಧ ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಮೈಸೂರಿನಲ್ಲಿ ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಂಗನಾಥ್ ಬೆಂಗಳೂರು ಮೂಲದ ಯುವತಿಗೆ ವಂಚಿಸಿರುವುದಾಗಿ ಆರೋಪಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ಸ್ನೇಹಿತರ ಮೂಲಕ 42 ವರ್ಷದ ರಂಗನಾಥ್‌ಗೆ 24 ವರ್ಷದ ಯುವತಿಯ ಪರಿಚಯವಾಗಿತ್ತು.
ನಂತರ ಯುವತಿಯೊಂದಿಗೆ ರಂಗನಾಥ್ ಲವ್ವಿಡವ್ವಿ ಶುರುಮಾಡಿದ್ದರು ಎಂಬ ಆರೋಪ ಬಂದಿದೆ. ಕಳೆದ ಜನವರಿಯಲ್ಲಿ ಮೈಸೂರಿನ ಖಾಸಗಿ ಹೋಟೇಲ್ ಒಂದರಲ್ಲಿ ಇಬ್ಬರೂ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಬಳಿಕ ಯುವತಿ ರಂಗನಾಥ್‌ಗೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಳು. ಆದರೆ ಬಳಿಕ ರಂಗನಾಥ್ ಯುವತಿಯನ್ನು ಕಡೆಗಣಿಸಲು ಪ್ರಾರಂಭಿಸಿದ್ದರು. ನಿನ್ನನ್ನು ಮದುವೆ ಆಗಲ್ಲ, ಏನು ಮಾಡ್ತೀಯೋ ಮಾಡಿಕೋ ಎಂದು ರಂಗನಾಥ್ ಹೇಳಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ.
ಇದೆಲ್ಲದರ ಬಳಿಕ ಯುವತಿ ರಂಗನಾಥ್ ವಿಚಾರವನ್ನು ದೇವೇಂದ್ರಪ್ಪ ಅವರ ಗಮನಕ್ಕೆ ತಂದಿದ್ದಾಳೆ. ಆದರೆ ಯುವತಿಯ ವಿರುದ್ಧ ಎಂಪಿ ದೇವೇಂದ್ರಪ್ಪ ಗರಂ ಆಗಿದ್ದಾರೆ. ಕೊನೆಗೆ ಬೇರೆ ಯಾವ ದಾರಿಯೂ ಕಾಣದೆ ಸಂತ್ರಸ್ತೆ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ. ಇದೀಗ ಎಂಪಿ ದೇವೇಂದ್ರಪ್ಪ ಅವರ ಮಗ ರಂಗನಾಥ್ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.