ಮಂಗಳೂರು :ಎಮ್ಮೆಕೆರೆಯಲ್ಲಿ ಒಲಿಂಪಿಕ್ಸ್‌ ಈಜುಕೊಳ ಕಾಮಗಾರಿ ಪೂರ್ಣಗೊಂಡಿದೆ – ಯುಟಿ ಖಾದರ್

ಮಂಗಳೂರು :- ಜಿಲ್ಲೆಯಲ್ಲಿ ಎಮ್ಮೆಕೆರೆಯಲ್ಲಿ ಒಲಿಂಪಿಕ್ಸ್‌ ಈಜುಕೊಳ ಕಾಮಗಾರಿ ಪೂರ್ಣಗೊಂಡಿದೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.ಈ ಸಂಬಂಧ ಮಾತನಾಡಿದ ಅವರು,ನಗರದ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಗುಣಮಟ್ಟದ ಈಜುಕೊಳ ಕಾಮಗಾರಿ ಸಂಪೂರ್ಣಗೊಂಡಿದ್ದು, ನ.24ರಿಂದ ನಡೆಯಲಿರುವ 19ನೇ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ಗೆ ಸನ್ನದ್ಧಗೊಂಡಿದೆ. ಈ ಚಾಂಪಿಯನ್‌ಶಿಪ್‌ ಉದ್ಘಾಟನೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈಜುಕೊಳವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಇಂಟರ್‌ ನ್ಯಾಷನಲ್ ಈಜು ಫೆಡರೇಶನ್ ನಿಗದಿಪಡಿಸಿದ ಮಾನದಂಡದಲ್ಲಿ ಈಜುಕೊಳವನ್ನು ನಿರ್ಮಿಸಲಾಗಿದೆ. ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಡಿಯಲ್ಲಿ ಒಟ್ಟು 24.94 ಕೋಟಿ ರು. ಯೋಜನಾ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು. ಈಜುಕೊಳವು 50 ಮೀ. ಉದ್ದ, 25 ಮೀ. ಅಗಲ ಮತ್ತು 2.2 ಮೀ.ನಿಂದ 1.4 ಮೀ.ವರೆಗಿನ ಆಳವನ್ನು ಹೊಂದಿದೆ. ಸ್ಪರ್ಧೆಯ ಪೂಲ್ ಜತೆಗೆ 25 ಮೀ. ಉದ್ದ- 10 ಮೀಟರ್ ಅಗಲ, 2.2 ಮೀ. ಆಳದ ಅಭ್ಯಾಸ ಪೂಲ್‌ನ್ನೂ ನಿರ್ಮಿಸಲಾಗಿದೆ. ಸ್ಪರ್ಧಾತ್ಮಕ ಈಜು ಸ್ಪರ್ಧೆಗೆ ಮಕ್ಕಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 13.8 ಮೀ. ಉದ್ದ- 10 ಮೀ. ಅಗಲ, 1.2 ಮೀಟರ್ ಆಳದ ಕಿಡ್ ಪೂಲ್‌ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಈಜುಕೊಳದ ವೈಶಿಷ್ಟ್ಯವೆಂದರೆ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ನೆಲಮಾಳಿಗೆಯಲ್ಲಿ ಪಾರ್ಕಿಂಗ್ ಮಾಡಲು ಅವಕಾಶವಿದೆ. ಕೆಳಭಾಗದಲ್ಲಿ ಫಿಲ್ಟರೇಶನ್ ಘಟಕ ಮಾಡಲಾಗಿದೆ. ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ವಸತಿ ನಿಲಯಗಳು, ಜಿಮ್ನಾಷಿಯಂ, ಬಟ್ಟೆ ಬದಲಾಯಿಸುವ ಕೊಠಡಿಗಳು, ಶೌಚಾಲಯಗಳು, ಲಾಕರ್‌ಗಳು, ಆಡಳಿತ ಕಚೇರಿ ಮತ್ತು ಕ್ರೀಡಾ ಔಷಧಕ್ಕಾಗಿ ಸ್ಥಳ, ಫಿಸಿಯೋಥೆರಪಿ, ಡೋಪಿಂಗ್ ಕೊಠಡಿ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ನಡೆಸಲು ಇತರ ಅಗತ್ಯ ಸೌಲಭ್ಯಗಳನ್ನು ಹೊಂದಿದೆ ಎಂದು ಖಾದರ್ ವಿವರ ನೀಡಿದರು.

Loading

Leave a Reply

Your email address will not be published. Required fields are marked *