ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರು ಇಂದು ಮಾಜಿ ಪ್ರಧಾನಿ ಮತ್ತು ಕೆಲವು ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ. ಕರ್ನಾಟಕ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಇಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಎಸ್ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ.
ಮಾಜಿ ಸಿಎಂ-ಪಿಎಂ ಭೇಟಿ ವೇಳೆ ಬಿವೈ ವಿಜಯೇಂದ್ರ ಅವರು ಮಾತುಕತೆ ನಡೆಸಿ ಹೊಸ ಜವಾಬ್ದಾರಿ ನಿರ್ವಹಣೆ ಕುರಿತು ಸಲಹೆಗಳನ್ನು ಪಡೆಯುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಶುಕ್ರವಾರ ಬಿವೈ ವಿಜಯೇಂದ್ರ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ ಎಂದು ಹೈಕಮಾಂಡ್ ಘೋಷಿಸಿ ಆದೇಶಿಸಿತು. ಕೇಂದ್ರದ ವರಿಷ್ಠರ ಈ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರರ ಆಯ್ಕೆ ನಿರ್ಧಾರವು ರಾಜ್ಯ ಬಿಜೆಪಿ ಪಾಳಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಯಡಿಯೂರಪ್ಪನವರ ಜತೆ ಗುರುತಿಸಿಕೊಂಡ ಒಂದಷ್ಟು ನಾಯಕರು ಮಾತ್ರ ನೂತನ ರಾಜ್ಯಾಧ್ಯಕ್ಷರಿಗೆ ಶುಭಕೋರಿದ್ದಾರೆ. ಇದು ಉಳಿದವರಲ್ಲಿ ಉಂಟಾದ ಅಸಮಾಧಾನವನ್ನು ಎತ್ತಿ ತೋರಿಸಿದೆ.
ಸದ್ಯ ರಾಜ್ಯಾಧ್ಯಕ್ಷರಾದ ಬಳಿಕ ಇದೇ ನವೆಂಬರ್ 15ರಂದು ಬುಧವಾರ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಹಿರಿಯ ಸಮ್ಮುಖದಲ್ಲಿ ವಿಜಯೇಂದ್ರ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮೊದಲು ಅವರು ಪಕ್ಷದ ಹಿರಿಯ ನಾಯಕರೂ ಆಗಿರುವ ಬೊಮ್ಮಾಯಿ, ಎಸ್ಎಂ ಕೃಷ್ಣ, ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರನ್ನು ಭೇಟಿ ಮಾಡಲಿದ್ದಾರೆ.