ಬೆಂಗಳೂರು:- ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಇಂದು ಸಂಜೆ 5 ಗಂಟೆಯಿಂದ ‘ಎಕ್ಸ್’ ಅಭಿಯಾನ ಹಮ್ಮಿಕೊಂಡಿದೆ. ‘#ಕನ್ನಡಬಾವುಟ_ನಮ್ಮಗುರುತು’, ‘#KannadaFlag_MyPride’ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಈ ಅಭಿಯಾನ ನಡೆಯಲಿದೆ. ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಯನ್ನು ಅಂಗೀಕರಿಸಬೇಕೆಂದು ‘ಎಕ್ಸ್’ ಅಭಿಯಾನದ ಮೂಲಕ ಒತ್ತಾಯಿಸಲಾಗುವುದು ಎಂದು ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.
‘ಕನ್ನಡಿಗರಿಗೆ ಕನ್ನಡ ಬಾವುಟ ಮೊದಲ ಗುರುತು. ಭಾರತ ಒಕ್ಕೂಟದ ಭಾಗವಾಗಿ ನಮ್ಮದೇ ಆದ ಬಾವುಟವೊಂದನ್ನು ಹೊಂದುವುದಕ್ಕೆ ಅವಕಾಶ ಇರಬೇಕು. ಈಗಾಗಲೇ ಕೋಟ್ಯಂತರ ಕನ್ನಡಿಗರು ಕನ್ನಡ ಬಾವುಟವನ್ನು ಆರಾಧಿಸುತ್ತಿದ್ದಾರೆ. ಹೀಗಾಗಿ, ಕೇಂದ್ರ ಸರ್ಕಾರ ಕೂಡಲೇ ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.