ಡೆಹ್ರಾಡೂನ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi) ಕೇದಾರನಾಥ ದೇಗುಲದಲ್ಲಿ (Keadaranath) ದೇವರ ದರ್ಶನಕ್ಕೆ ಕಾಯುತ್ತಿದ್ದ ಯಾತ್ರಾರ್ಥಿಗಳಿಗೆ ಚಹಾ ನೀಡಿದ ಪ್ರಸಂಗವೊಂದು ನಡೆದಿದೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮೂರು ದಿನಗಳ ಭೇಟಿಗಾಗಿ ರಾಹುಲ್ ಗಾಂಧಿಯವರು ಭಾನುವಾರ ಉತ್ತರಾಖಂಡಕ್ಕೆ ತೆರಳಿದ್ದಾರೆ. ಅಂತೆಯೇ ಬೆಟ್ಟದ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ತಮ್ಮ ಸರದಿಗಾಗಿ ಕಾಯುತ್ತಿರುವ ಯಾತ್ರಾರ್ಥಿಗಳಿಗೆ ಚಹಾ ನೀಡುತ್ತಾ ‘ಚಾಯ್ ಸೇವೆ’ ಮಾಡುತ್ತಿರುವುದು ಕಂಡುಬಂದಿತು.
ಒಬ್ಬ ಜನಪ್ರಿಯ ನಾಯಕ ಸಾರ್ವಜನಿಕರೊಂದಿಗೆ ಮಾತನಾಡುವುದನ್ನು ಕಂಡು ಆಶ್ಚರ್ಯಚಕಿತರಾದ ಭಕ್ತರು ಸೆಲ್ಫಿಗಾಗಿ ಮನವಿ ಮಾಡಿದರು. ಈ ವೇಳೆ ರಾಗಾ ಅವರು ಕೂಡ ಭಕ್ತರ ಮನವಿಯನ್ನು ತಿರಸ್ಕರಿಸಿದೆ ಸೆಲ್ಫಿ ನೀಡಿದರು. ರಾಗಾ ಅವರು ಯಾತ್ರಾರ್ಥಿಗಳಿಗೆ ಚಹಾ ಹಂಚುತ್ತಿದ್ದಾಗ ಭಕ್ತರೊಬ್ಬರು ಸರ್, ನಾವು ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ನಾವು ನಿಮ್ಮನ್ನು ನಿಜವಾಗಿ ನೋಡುತ್ತಿದ್ದೇವೆ. ನಾನು ನಿಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಬಹುದೇ ಎಂದು ಕೇಳಿದ್ದಾರೆ. ರಾಹುಲ್ ಗಾಂಧಿಯವರು ಕೇದಾರನಾಥದಲ್ಲಿ ಪ್ರಾರ್ಥನೆ ಸಲ್ಲಿಸಿ, ಆರತಿಯಲ್ಲಿ ಭಾಗವಹಿಸಿದರು ಎಂದು ಕಾಂಗ್ರೆಸ್ (Congress) ತನ್ನ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿದೆ.