ಹಾವೇರಿ: ಒಂದೇ ಕುಟುಂಬದ ಮೂವರನ್ನು ಕೊಚ್ಚಿ ಕೊಲೆಗೈದು ಬಳಿಕ ಆರೋಪಿ ಪರಾರಿಯಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ̤ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೀತಾ ಮರಿಗೌಡ್ರು (32), ಅಕುಲ್ (10) ಹಾಗೂ ಅಂಕಿತಾ (7) ವರ್ಷ ಕೊಲೆಯಾದ ದುರ್ದೈವಿಗಳು. ಇವರನ್ನು ಕುಮಾರಗೌಡ ಮರಿಗೌಡ್ರು (35) ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ.
ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಮರಿಗೌಡ್ರು ತನ್ನ ಸ್ವಂತ ಅಣ್ಣ ಹೊನ್ನೆಗೌಡನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಕುಟುಂಬದೊಳಗಿನ ಜಗಳವೇ ಕೊಲೆಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಗಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.