ಬೆಂಗಳೂರು;- ಸಿದ್ದರಾಮಯ್ಯರೇ ಐದು ವರ್ಷಗಳ ಕಾಲ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ DCM ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಈ ವಿಚಾರವಾಗಿ ಬಹಿರಂಗವಾಗಿ ಮಾತನಾಡುವುದಿಲ್ಲ. ಪಕ್ಷ ಹೇಳಿದ್ದನ್ನು ಪಾಲಿಸುವುದಷ್ಟೆ ನಮಗೆ ಗೊತ್ತು ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಕಿತ್ತಾಟ ಇಲ್ಲ. ಕಿತ್ತಾಟ ಇರೋದು ಬಿಜೆಪಿಯಲ್ಲಿ. ಹೀಗಾಗಿ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಲು ಆಗಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಕಚ್ಚಾಡುತ್ತಿದ್ದಾರೆ ಎಂಬ ಮಾಜಿ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಯಾವುದೇ ಜಗಳ ಇಲ್ಲ. ಬಿಜೆಪಿ ಮುಖಂಡರು ತಮ್ಮ ವೈಫಲ್ಯ ಮುಚ್ಚಿಡಲು ಈ ರೀತಿ ಮಾತನಾಡುತ್ತಾರೆ.
ನಮ್ಮ ಶಾಸಕರುಗಳಿಗೆ ಚಾಕೊಲೇಟ್ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು. ಆಪರೇಶನ್ ಕಮಲ ಮಾಡುತ್ತಿಲ್ಲ, ಬೇಕಾದರೆ ಅವರೇ ತನಿಖೆ ಮಾಡಿಸಲಿ ಎಂಬ ಯಡಿಯೂರಪ್ಪ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿದ ಅವರು, ಯಡಿಯೂರಪ್ಪ ಅವರ ಸಲಹೆ ಗಮನದಲ್ಲಿ ಇಟ್ಟುಕೊಳ್ಳುತ್ತೇವೆ ಎಂದು ತಿಳಿಸಿದರು.