IND vs SL: 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ಪರ ಜಸ್ಪ್ರೀತ್ ಬುಮ್ರಾ ಐತಿಹಾಸಿಕ ಸಾಧನೆ!

ಮುಂಬೈ: ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಕ್ರಿಕೆಟ್ ವಿಶ್ವಕಪ್ ಪಂದ್ಯದ ವೇಳೆ ತಂಡದ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟ್ ತಂಡದ ಬೌಲರ್ ಎನಿಸಿಕೊಂಡಿದ್ದಾರೆ. 48 ವರ್ಷಗಳ ಇತಿಹಾಸದಲ್ಲೇ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತಕ್ಕೆ ಬುಮ್ರಾ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ವಾಂಖೆಡೆ ಮೈದಾನದಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಮೊದಲ ಓವರ್‌ ಬೌಲಿಂಗ್‌ ಮಾಡಿದರು. ಮೊದಲ ಎಸೆತದಲ್ಲೇ ಪಾತುಮ್ ನಿಸ್ಸಾಂಕಾ ಎಲ್‌ಬಿಡಬ್ಲ್ಯು ಆದರು. ಬ್ಯಾಟ್‌ಗೆ ಸಿಗದ ಬಾಲ್‌ ವೇಗವಾಗಿ ಹೋಗಿ ಪ್ಯಾಡ್‌ಗೆ ಬಡಿಯಿತು. ಅಂಪೈರ್ ಅದನ್ನು ಔಟ್ ಎಂದು ತೀರ್ಪು ನೀಡಿದರು. ಡಿಆರ್‌ಎಸ್‌ನಲ್ಲೂ ಅದು ಔಟ್‌ ಎಂದು ದೃಢಪಟ್ಟಿತು. ಭಾರತದ ಯಾವ ಬೌಲರ್‌ ಕೂಡ ಈ ಸಾಧನೆಯನ್ನು ಮಾಡಿಲ್ಲ.

ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಮತ್ತೊಂದು ದಾಖಲೆ ಆಗಿದೆ. ವಿರಾಟ್‌ ಕೊಹ್ಲಿ ಭಾರತ ತಂಡದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರ ಮತ್ತೊಂದು ದಾಖಲೆಯನ್ನು ಮುರಿದು ಇತಿಹಾಸ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್‌ ವರ್ಷದಲ್ಲಿ 8 ಬಾರಿ 1,000 ಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಚಿನ್‌ ತೆಂಡೂಲ್ಕರ್‌ 7 ಬಾರಿ ಈ ಸಾಧನೆ ಮಾಡಿದ್ದರು.

ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 8 ವಿಕೆಟ್‌ ನಷ್ಟಕ್ಕೆ 357 ರನ್‌ ಗಳಿಸಿತ್ತು. ಬೃಹತ್‌ ರನ್‌ ಗುರಿ ಬೆನ್ನತ್ತಿದ ಶ್ರೀಲಂಕಾ ಹೀನಾಯ ಸೋಲನುಭವಿಸಿತು. ಕೇವಲ 19.4 ಓವರ್‌ಗಳಲ್ಲೇ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 55 ರನ್‌ ಮಾತ್ರ ಗಳಿಸಿತು. ಭಾರತ 302 ರನ್‌ಗಳ ಭರ್ಜರಿ ಜಯ ಸಾಧಿಸಿತು.

Loading

Leave a Reply

Your email address will not be published. Required fields are marked *