ಬೆಂಗಳೂರು :- ಡಿಸಿಎಂ ಡಿಕೆ ಶಿವಕುಮಾರ್ ಅವರು, ರಾಜ್ಯದ ಹಿತ ಕಾಯಲು ನಮ್ಮ ಸರ್ಕಾರ ಬದ್ಬವಾಗಿದ ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಎಂಇಎಸ್ ಕರಾಳ ದಿನ ಆಚರಣೆಗೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದರು. ಅವರ ನಿರ್ಧಾರ ತಪ್ಪು. ನಾವು ನಮ್ಮ ರಾಜ್ಯದ ಹಿತ ಕಾಯಲು, ಕನ್ನಡಿಗರ ರಕ್ಷಣೆಗೆ ಬದ್ಧ. ಕರ್ನಾಟಕದಲ್ಲಿರುವ ಜನರು, ಅಲ್ಲಿರುವ ಕನ್ನಡಿಗರ ರಕ್ಷಣೆ ವಿಚಾರದಲ್ಲಿ ನಮ್ಮ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ನಿನ್ನೆ ಮುಖ್ಯಮಂತ್ರಿಗಳು ಕೂಡ ಗೃಹ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿ ನಾಯಕರು ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ಮಾಡಿದರೆ ತಪ್ಪೇನೂ ಇಲ್ಲ. ಕೇಂದ್ರ ಬರ ಅಧ್ಯಯನ ತಂಡ ಇಲ್ಲಿ ಪರಿಸ್ಥಿತಿ ಅಧ್ಯಯನ ಮಾಡಿದೆ, ಆದರೂ ಯಾವುದೇ ನೆರವು ಬಂದಿಲ್ಲ. ಈಗ ಬಿಜೆಪಿ ನಾಯಕರು ಬರ ಅಧ್ಯಯನ ಮಾಡಿ ಕೇಂದ್ರದಿಂದ ಪರಿಹಾರ ಕೊಡಿಸಲಿ. ಕರ್ನಾಟಕ ಸರ್ಕಾರ, ಕೇಂದ್ರದ ಬರ ಪರಿಸ್ಥಿತಿ ನಿಯಮಗಳ ಅನುಸಾರ ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ ಬರ ಪರಿಹಾರ ನೀಡುವಲ್ಲಿ ಉಪಕಾರ ಮನಸ್ಥಿತಿ ಪ್ರದರ್ಶಿಸಲಿ. ಕಂದಾಯ ಸಚಿವರು ಹಾಗೂ ಕೃಷಿ ಸಚಿವರು ಕೇಂದ್ರಕ್ಕೆ ಸಲ್ಲಿಸಿರುವ ಮನವಿಗೆ ತಕ್ಕಂತೆ ಪರಿಹಾರ ನೀಡಲಿ ಎಂದು ಡಿಕೆಶಿ ಒತ್ತಾಯಿಸಿದ್ದಾರೆ.