ಬೆಂಗಳೂರು;- ಚುನಾವಣಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಹೆಚ್ ಡಿ ರೇವಣ್ಣಗೆ ಬೆಂಗಳೂರಿನ ಹೈಕೋರ್ಟ್ ಸಮನ್ಸ್ ಮರು ಜಾರಿ ಮಾಡಿದೆ. ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ ಸಮನ್ಸ್ ಜಾರಿ ಮಾಡಿತ್ತು. ಆದರೆ, ಪ್ರತಿವಾದಿ ರೇವಣ್ಣ ಸಮನ್ಸ್ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿಗಳ ಮೂಲಕ ಮತ್ತೊಂದು ಬಾರಿ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದೆ.
ವಕೀಲ ದೇವರಾಜೇಗೌಡ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ ಡಿ ರೇವಣ್ಣ ಭಾರಿ ಅಕ್ರಮಗಳನ್ನು ಎಸಗಿ ಜಯ ಗಳಿಸಿದ್ದಾರೆ. ಜೊತೆಗೆ ಅವರು ಮತ ಗಳಿಕೆಯಲ್ಲಿ 2ನೇ ಸ್ಥಾನದಲ್ಲಿದ್ದ ಶ್ರೇಯಸ್ ಪಟೇಲ್ ಕೂಡ ಮತದಾರರಿಗೆ ಆಮಿಷವೊಡ್ಡಿದ್ದಾರೆ. ಹಾಗಾಗಿ ಇವರಿಬ್ಬರ ಮತ ಗಳಿಕೆಯನ್ನು ಅಸಿಂಧುಗೊಳಿಸಬೇಕೆಂದು ಕೋರಿದ್ದಾರೆ.
ಚುನಾವಣೆಯಲ್ಲಿ ಹೆಚ್ ಡಿ ರೇವಣ್ಣ 88,103, ಎರಡನೇ ಅಭ್ಯರ್ಥಿ ಶ್ರೇಯಸ್ ಎಂ ಪಟೇಲ್ 84,951 ಹಾಗೂ ಅರ್ಜಿದಾರರು 4850 ಮತಗಳನ್ನು ಪಡೆದಿದ್ದಾರೆ. ಉಳಿದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ರೇವಣ್ಣ ವ್ಯಾಪಕ ಚುನಾವಣಾ ಅಕ್ರಮಗಳನ್ನು ಎಸಗಿದ್ದಾರೆ. ಆ ರೀತಿ ಅಕ್ರಮ ಎಸಗಿ ಗಳಿಸಿದ ಮತಗಳನ್ನು ಸಿಂಧುವೆಂದು ಪರಿಗಣಿಸಲು ಪ್ರಜಾಪ್ರತಿನಿಧಿ ಕಾಯಿದೆ 1951, ನೀತಿ ಸಂಹಿತೆ ಮತ್ತು ನಿಯಮ 1961 ಹಾಗೂ 2006ರ ಮಾರ್ಗಸೂಚಿಯಲ್ಲಿ ಅವಕಾಶವಿಲ್ಲ. ಹಾಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ಅರ್ಜಿದಾರರನ್ನು ಆಯ್ಕೆಯಾಗಿದ್ದಾರೆಂದು ಘೋಷಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.