ಬೆಂಗಳೂರು;- ನಿಗಮ ಮಂಡಳಿ ಪರೀಕ್ಷಾ ಅಕ್ರಮದ ನೈತಿಕ ಜವಾಬ್ದಾರಿ ಹೊತ್ತು ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ಅಶ್ವತ್ಥನಾರಾಯಣ್ ಆಗ್ರಹಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಿಗಮ ಮಂಡಳಿ ಪರೀಕ್ಷಾ ಅಕ್ರಮದ ಹೊಣೆಯನ್ನು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೊತ್ತುಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಯಾವಾಗ ಅಧಿಕಾರಕ್ಕೆ ಬಂದರೂ ವ್ಯವಸ್ಥೆ ಅವ್ಯವಸ್ಥೆ ಆಗುತ್ತದೆ. ಭ್ರಷ್ಟಾಚಾರ ತಾಂಡವವಾಡುತ್ತದೆ. ಮೆರಿಟ್ ಆಧಾರದ ಮೇಲೆ ಹುದ್ದೆಗಳು ಸಿಗಲ್ಲ. ನಿಗಮ ಮಂಡಳಿ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಪರೀಕ್ಷಾ ಅಕ್ರಮವನ್ನು ಪತ್ತೆ ಹಚ್ಚಿದ್ದೇವೆ ಅಂತ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆದರೆ ಆರ್.ಡಿ,ಪಾಟೀಲ್ ಈಗಾಗಲೇ ಗರಿ ಬಿಚ್ಚಿ, ವ್ಯವಹಾರ ಶುರು ಮಾಡಿದ್ದಾರೆ. ಸರ್ಕಾರ ತಡೆಯುವಲ್ಲಿ ವಿಫಲವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾಗಿ ನೀವು ಆರ್.ಡಿ.ಪಾಟೀಲ್‌ನನ್ನು ಮತ್ತೆ ಬಂಧಿಸುವಲ್ಲಿ ವಿಫಲವಾಗಿದ್ದೀರಿ. ಪ್ರಿಯಾಂಕ್ ಖರ್ಗೆ ಅವರೇ ಸೋಲಿನಲ್ಲೂ, ಗೆಲುವು ಅಂತ ಹೊರಟಿದ್ದೀರಿ.
ನೀವೇನು ಪರೀಕ್ಷಾ ಅಕ್ರಮ ಪತ್ತೆ ಹಚ್ಚಿಲ್ಲ. ನೀವು ಕೂಡ ಇದರಲ್ಲಿ ಶಾಮೀಲಾಗಿದ್ದೀರಿ. ನಿಮ್ಮ ತಂದೆ ಕಾಲದಲ್ಲಿ ನಡೆದಿರುವ ಪಿಎಸ್‌ಐ ನೇಮಕಾತಿ ನೋಡಿಕೊಂಡು ಬರಬೇಕು. ನಮ್ಮ ಕಾಲದಲ್ಲಿ ಸಚಿವ ಆರಗ ಜ್ಞಾನೇಂದ್ರ ಅಕ್ರಮ ಹೊರಗೆ ತಂದಿದ್ದಾರೆ. ಆರ್.ಡಿ.ಪಾಟೀಲ್ ಜೊತೆ ಸೇರಿ ನೀವು ಅಕ್ರಮದಲ್ಲಿ ಭಾಗಿಯಾಗಿದ್ದೀರಿ. ಯಾವ್ಯಾವ ಕಾಲದಲ್ಲಿ ಏನೇನು ನಡೆದಿದೆ. ಈಗ ಗೊತ್ತಿಲ್ಲ ಅಂತಿದ್ದೀರಾ.? ಕ್ರಮ ವಹಿಸಿರೋದು ಆರಗ ಜ್ಞಾನೆಂದ್ರ ಅವರು. ನೀವು ಕ್ರೆಡಿಟ್ ತಗೊಳೋಕೆ ಹೊರಟಿದ್ದೀರಿ. ಇದರಿಂದ ಮೆರಿಟ್ ಅಭ್ಯರ್ಥಿಗಳಿಗೆ ಅನ್ಯಾಯ ಆಗಲಿದೆ. ನಿಮಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಿ. ಸಿಎಂ ಸಿದ್ದರಾಮಯ್ಯ, ನೀವು ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದೀರಿ ಎಂದು ಆರೋಪಿಸಿದ್ದಾರೆ.