ಬೆಂಗಳೂರು :ಲೋಕಸಭೆ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿವೆ. ಈ ಮೂರೂ ಪಕ್ಷಗಳ ಒಳಗಿನ ಮುಂದಿನ ನಡೆ ಕುತೂಹಲ ಮೂಡಿಸಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮೂರು ಪಕ್ಷಗಳಲ್ಲೂ ತಯಾರಿ ಶುರುವಾಗಿದೆ. ಆದರೆ ಪಕ್ಷಗಳಲ್ಲಿ ಶುರುವಾಗಿರುವ ಆಂತರಿಕ ಬೇಗುದಿ ಮಾತ್ರ ಕಡಿಮೆ ಆಗುತ್ತಿಲ್ಲ. ಇದು ವಿಧಾನಸಭಾ ಚುನಾವಣೆಯಲ್ಲಿ ಆದ ಲಾಭ ಕಳೆದುಕೊಳ್ಳುವ ಲೆಕ್ಕಾಚಾರ ಕಾಂಗ್ರೆಸ್‌ಗೆ ಸುತ್ತಿಕೊಳ್ಳುತ್ತಿದ್ದರೆ, ಬಿಜೆಪಿ ಆದಷ್ಟು ಬೇಗ ತಪ್ಪು ತಿದ್ದಿಕೊಳ್ಳದಿದ್ದರೆ ಮತ್ತೆ ಮುಖಭಂಗ ಆನುಭವಿಸುವ ಕಾಲ ದೂರವಿಲ್ಲ. ಇತ್ತ ಜೆಡಿಎಸ್ ನಾಯಕರಿಗೆ ʼಕುಟುಂಬದ ಪಕ್ಷʼ ಅನ್ನೋ ಅಪವಾದ ದೂರವಾಗುತ್ತಿಲ್ಲ
ಲೋಕಸಭಾ ಚುನಾವಣೆಗೂ ಮೊದಲೇ ನಾನಾ ನೀನಾ ಫೈಟ್:
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಹುಪಾಲು ಗ್ಯಾರಂಟಿಗಳೇ ಕಾರಣ ಅನ್ನೋ ಮಾತಿದೆ. ಇದು ಸುಳ್ಳು. ಕಾಂಗ್ರೆಸ್ ಅಧಿಕಾರಕ್ಕೆ ಬಹುಪಾಲು ಕಾರಣ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಒಂದಾಗಿ ಹೋಗಿದ್ದು ಎಂಬುದು ಕೆಲವರ ವಾದ. ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದಾಗ ನಮ್ಮ ಗೆಲುವಿಗೆ ಇನ್ನು ಸಾಟಿಯಾರು ಎಂದು ಹೇಳಿದ ಬಿಜೆಪಿ ಮತ್ತು ಜೆಡಿಎಸ್‌ಗೆ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ಕೊಟ್ಟಿದ್ದಾರೆ. ಯಾರೂ ಊಹೆ ಮಾಡದ ರೀತಿಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತು. ಆದರೆ ಸರ್ಕಾರ ರಚನೆಯಾಗಿ ಆರು ತಿಂಗಳು ಮುಗಿಯುವಷ್ಟರಲ್ಲಿ, ಕಾಂಗ್ರೆಸ್ ಮುಂಚೂಣಿ ನಾಯಕರ ನಡುವೆ ನಾನಾ ನೀನಾ ಫೈಟ್ ಶುರುವಾಗಿದೆ. ಅವಕಾಶಕ್ಕಾಗಿ ಲಾಬಿ ಮಾಡುವುದು ತಪ್ಪಲ್ಲ. ಆದರೆ ದಿನ ಬೆಳಗಾದರೆ ಮುಂದಿನ ಅಧಿಕಾರಕ್ಕೆ ಪೈಪೋಟಿ ನಡೆಸುವುದು ಪಕ್ಷಕ್ಕೆ ಭಾರಿ ಹಾನಿ ತರಲಿದೆ ಎಂಬ ಸಲಹೆ ಪಕ್ಷದ ಹಿರಿಯರಿಂದ ಕೇಳಿ ಬರುತ್ತಿದೆ.
ಕಾರ್ಯಕರ್ತರ ಕೈಗೆ ಚಿಪ್ಪು!:
ಇಂದೋ ನಾಳೆಯೋ ಬಿಡುಗಡೆ ಆಗಲಿರುವ ಕಾಂಗ್ರೆಸ್ ನಿಗಮ ಮಂಡಳಿ ಪಟ್ಟಿಯಲ್ಲಿ ಬರೀ ಶಾಸಕರಿಗೆ ಮಾತ್ರ ಸ್ಥಾನಮಾನ ಸಿಕ್ಕಿದ್ದು, ಈ ಬಾರಿಯೂ ಕಾರ್ಯಕರ್ತರ ಕೈಗೆ ಹಿರಿಯ ನಾಯಕರು ಚಿಪ್ಪು ಕೊಟ್ಟಿದ್ದಾರೆ. ಹೀಗಾಗಿ ಕಾರ್ಯಕರ್ತರು ಪಕ್ಷದ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಕಾರ್ಯಕರ್ತರನ್ನು ಕೇವಲ ಚುನಾವಣೆ ಕೆಲಸಕ್ಕೆ ಸೀಮಿತ ಮಾಡಿದರೆ ಪಕ್ಷಗಳ ಹಿರಿಯ ನಾಯಕರ ಮೇಲೆ ಅಸಮಾಧಾನ ದಿನೇದಿನೆ ಹೆಚ್ಚಾಗಿ ಇದು ಮುಂದೆ ಬರುವ ಚುನಾವಣೆ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕವೂ ಕಾಂಗ್ರೆಸ್‌ನೊಳಗೆ ವ್ಯಕ್ತವಾಗುತ್ತಿದೆ.
ಪರಮೇಶ್ವರ್ ಕೊಟ್ಟ ಸಂದೇಶವೇನು?
ಸಿದ್ದರಾಮಯ್ಯ ಮೇಲೆ ಪರಮೇಶ್ವರ್‌ಗೆ ವೈಯಕ್ತಿಕ ಭಿನ್ನಾಭಿಪ್ರಾಯ ಇಲ್ಲದಿದ್ದರೂ, 2013ರಲ್ಲಿ ತಮ್ಮ ಸೋಲಿಗೆ ಸಿದ್ದರಾಮಯ್ಯ ಕಾರಣ ಅಂತ ಹೇಳುತ್ತಿದ್ದ ಅವರ ಬೆಂಬಲಿಗರ ಪಡೆಯ ಮಾತಿನಿಂದ ಭಾರಿ ಡಿಸ್ಟರ್ಬ್ ಆಗಿದ್ದರು. ಆದರೆ 2023ರಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಸಿದ್ದರಾಮಯ್ಯಗೆ ಇದು ಕೊನೆಯ ಅವಕಾಶ ಸಿಕ್ಕಿರುವ ಹಾಗೇ ತಮಗೂ ಕೊನೆಯ ಅವಕಾಶ ಬೇಕು ಎನ್ನುವುದು ಪರಮೇಶ್ವರ್ ಲೆಕ್ಕಾಚಾರ. ಆದರೆ ಎರಡೂವರೆ ವರ್ಷಗಳ ಬಳಿಕ ಡಿ ಕೆ ಶಿವಕುಮಾರ್ ಸಿಎಂ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಮೊನ್ನೆ ರಾತ್ರಿ ಏಕಾಏಕಿ ತಮ್ಮ ಮನೆಯಲ್ಲಿ ಪರಮೇಶ್ವರ್ ಡಿನ್ನರ್ ಸಭೆ ಮಾಡಿ ಡಿ ಕೆ ಶಿವಕುಮಾರ್‌ಗೆ ಒಂದು ಸಂದೇಶ ರವಾನೆ ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಜೆಡಿಎಸ್‌ನ ಭವಿಷ್ಯ; ಕುಟುಂಬ ರಾಜಕಾರಣದ ಅಪವಾದ:
ದಿನಕಳೆದಂತೆ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಪುತ್ರನಿಗೆ ಜವಾಬ್ದಾರಿ ಜಾಸ್ತಿ ಕೊಡ್ತಿದ್ದಾರೆ. ದೆಹಲಿಯಲ್ಲಿ ಬಿಜೆಪಿ – ಜೆಡಿಎಸ್ ಮಾತುಕತೆಗೂ ಕುಮಾರಸ್ವಾಮಿ ತಮ್ಮ ಜತೆ ನಿಖಿಲ್ ಅವರನ್ನು ಕರೆದುಕೊಂಡು ಹೋಗಿದ್ದರು. ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ರಾಷ್ಟ್ರ ಮಟ್ಟದ ಪಕ್ಷಗಳ ಕೆಲವು ನಾಯಕರನ್ನ ಭೇಟಿ ಮಾಡಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನೂ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಇದು ಗೌಡರ ಕುಟುಂಬಕ್ಕೆ ಹಿತವಾಗಿ ಕಂಡರೆ, ಕಾರ್ಯಕರ್ತರಿಗೆ ಮಾತ್ರ ಕಹಿಯಾಗಿ ಕಂಡಿದೆ. ನಿಖಿಲ್ ಜತೆ ಕನಿಷ್ಠ ಮತ್ತೊಬ್ಬ ಕಾರ್ಯಕರ್ತನನ್ನ ಕರೆದುಕೊಂಡು ಹೋಗಿದ್ದರೂ, ಕುಟುಂಬ ರಾಜಕಾರಣದಿಂದ ಹೊರಬರುವ ಪ್ರಯತ್ನ ಎನ್ನಬಹುದಿತ್ತು ಅನ್ನೋ ಮಾತು ಕೇಳಿ ಬಂತು!
ರಾಷ್ಟ್ರೀಯ ಬಿಜೆಪಿ ನಡೆ ಸರಿಯಲ್ಲ
ಸೋಲು ಮತ್ತು ಗೆಲುವನ್ನು ಸಮಾನವಾಗಿ, ಸಮಾಧಾನವಾಗಿ ಸ್ವೀಕರಿಸುವ ಲಕ್ಷಣ ರಾಷ್ಟ್ರೀಯ ಬಿಜೆಪಿ ನಾಯಕರಿಗೆ ಇದ್ದಂತೆ ಕಾಣುತ್ತಿಲ್ಲ. ಸೋತರೆ ಆ ರಾಜ್ಯದ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನನ್ನ ಸಹ ನೇಮಕ ಮಾಡದಿರುವುದು ಸರಿಯಲ್ಲ. ರಾಜ್ಯ ನಾಯಕರು ಪದೇಪದೇ ಮನವಿ ಮಾಡಿದರೂ ಇಷ್ಟೊಂದು ಅಸಹನೆ ತೋರಿಸುವುದು ಒಂದು ರಾಷ್ಟ್ರೀಯ ಪಕ್ಷಕ್ಕೆ ಶೋಭೆ ತರುವಂಥದಲ್ಲ ಎಂಬ ಅಭಿಮತ ಕೇಳಿ ಬರುತ್ತಿದೆ.