ಬೆಂಗಳೂರು;- ಬೆಂಗಳೂರಿನ ಹೈಕೋರ್ಟ್ ಪೀಠವು ಅಶ್ವಥ್ ಹೆಗ್ಡೆ ವಿರುದ್ಧ ದಾಖಲಾದ ವಂಚನೆ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.ಪರಿಸರ ಸ್ನೇಹಿ ಕೈ ಚೀಲ ತಯಾರಿಸುವ ಯಂತ್ರ ನೀಡುವುದಾಗಿ ಭರವಸೆ ನೀಡಿ ಹಣ ಮೋಸ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಎಫ್‌ಐ ಆರ್ ರದ್ದುಗೊಳಿಸಬೇಕೆಂದು ಆಶ್ವಥ್ ಹೆಗ್ಡೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿ ಪ್ರಕರಣ ತನಿಖೆ ನಡೆಸದಿರಲು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಎನ್ವಿ ಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಡೆಟ್ ವ್ಯವಸ್ಥಾಪಕ ನಿರ್ದೇಶಕ ಅಶ್ವಥ್ ಹೆಗ್ಡೆ ವಿರುದ್ಧ ಮಹಿಳಾ ಉದ್ಯಮಿ ನೀಲಿಮಾ ಎಂಬುವರು ನೀಡಿದ ದೂರು ಆಧರಿಸಿ ವಂಚನೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಥ್ ಹೆಗ್ಡೆ ಅವರು, ”ನನ್ನ ಮೇಲೆ ಬಂದಿರುವ ಆರೋಪ ಶುದ್ದ ಸುಳ್ಳು. ಯಾವುದೇ ಅವ್ಯವಹಾರ ಎಸಗಿಲ್ಲ. ಸುಖಾಸುಮ್ಮನೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಠಾಣೆಯಲ್ಲಿ ದೂರು ದಾಖಲಿಸಿ ತೇಜೋವಧೆ ಮಾಡುವ ಪ್ರಯತ್ನ ನಡೆಸಿದ್ದಾರೆ. ತಮ್ಮ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು” ಎಂದು ಸ್ಪಷ್ಟನೆ ನೀಡಿದ್ದಾರೆ.