ಗುಬ್ಬಿ: ಕಳೆದ ಐದು ತಿಂಗಳಿಂದ ಯಾವುದೇ ಅನುದಾನ ನೀಡದೆ ಅಭಿವೃದ್ದಿ ಕಾರ್ಯ ಶೂನ್ಯಗೊಳಿಸಿ ಕೇವಲ ಜಾತಿ ಧರ್ಮ ಬಳಸಿ ಅಧಿಕಾರಕ್ಕೆ ಹಾತೊರೆಯುವ ಕಾಂಗ್ರೆಸ್ ಈ ಸರ್ಕಾರದ್ದಾಗಿದೆ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಟೀಕಿಸಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಚೆಂಗಾವಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ, ಎತ್ತಿನಹೊಳೆ ಯೋಜನೆಯ ಸಿಸಿ ರಸ್ತೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂಗನವಾಡಿ ಕಟ್ಟಡ ಕಾಮಗಾರಿ ಒಟ್ಟು ಎಂಟು ಗ್ರಾಮದ 4.50 ಕೋಟಿ ರೂಗಳ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ದಲಿತ ಸಿಎಂ ಕೂಗು ಸ್ವಾಗತಾರ್ಹ. ಎಲ್ಲರೂ ಮಾಡಿದ ಅಧಿಕಾರ ದಲಿತರು ಮಾಡಲಿ. ಈ ಬಗ್ಗೆ ನಮ್ಮದು ಒಪ್ಪಿಗೆ ಎಂದು ಕಾಂಗ್ರೆಸ್ ಪಕ್ಷದ ಆಂತರಿಕ ಬಿಸಿ ವಿಚಾರಕ್ಕೆ ಟಾಂಗ್ ನೀಡಿದರು.
ಲೋಕಸಭಾ ಚುನಾವಣೆ ವಿಚಾರದಲ್ಲಿ ನಮ್ಮ ವರಿಷ್ಠರ ನಿರ್ಧಾರಕ್ಕೆ ಬದ್ದವಾಗಿದ್ದೇವೆ. ಬಿಜೆಪಿ ಮೈತ್ರಿ ಸಂಪೂರ್ಣ ಸಹಮತವಿದೆ. ಸದ್ಯದ ಪಂಚರಾಜ್ಯಗಳ ಚುನಾವಣೆ ನಂತರ ಸ್ಥಾನ ಹಂಚಿಕೆ ಮುನ್ನಲೆಗೆ ಬರಲಿದೆ. ತುಮಕೂರು ಕ್ಷೇತ್ರ ದಲ್ಲಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ ಎಂದ ಅವರು ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಯಲ್ಲಿ ಯಾವುದೇ ರಾಜಿ ಮಾಡುವಂತಿಲ್ಲ. ಗುಣಮಟ್ಟದ ಕೆಲಸ ನಿರೀಕ್ಷೆಯಂತೆ ನಡೆಯಲಿ. ಗುಣಮಟ್ಟ ಕಾಪಾಡುವಲ್ಲಿ ಸಂಬಂಧಪಟ್ಟ ಇಂಜಿನಿಯರ್ ಗಳು ಗಮನ ಹರಿಸಬೇಕು ಎಂದು ಅಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಬರಗಾಲ ಪೀಡಿತ ಜಿಲ್ಲೆಗೆ ಹೇಮಾವತಿ ನದಿ ನೀರು ಅತ್ಯವಶ್ಯ. ಸರ್ಕಾರದಿಂದ ಯಾವ ಪರಿಹಾರ ನಿರೀಕ್ಷೆ ಇಲ್ಲದ ಕಾರಣ ನೀರು ಹಂಚಿಕೆಯ ಸಭೆಯಲ್ಲಿ ಚರ್ಚಿಸಿ ಹೇಮಾವತಿ ಜಿಲ್ಲೆಗೆ ಹರಿಸಲು ಶ್ರಮಿಸಿದ್ದೇವೆ. ರೈತರು ಕೆರೆಗೆ ನೀರು ತುಂಬಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದ ಅವರು ಸಿ.ಎಸ್.ಪುರ ಹೋಬಳಿಯ ಹಲವು ಗ್ರಾಮದ ಅಭಿವೃದ್ದಿ ಕೆಲಸಕ್ಕೆ ಸರ್ಕಾರದ ಜೊತೆ ಗುದ್ದಾಡಿ ಅನುದಾನ ತರುವಂತಾಗಿದೆ. ಸದ್ಯಕ್ಕೆ 5 ಕೋಟಿ ಕೆಲಸಕ್ಕೆ ಚಾಲನೆ ದೊರಕಿದೆ. ಎತ್ತಿನಹೊಳೆ ಯೋಜನೆಯ ಎರಡು ಕೋಟಿ ಹಣದಲ್ಲಿ ಸಿಸಿ ರಸ್ತೆಗಳು, ಒಂದೂವರೆ ಕೋಟಿ ಜೆಜೆಎಂ ಮನೆ ಮನೆಗೆ ನಳ ಸಂಪರ್ಕ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಒಂದು ಕೋಟಿ ರೂಗಳಲ್ಲಿ ಅಂಗನವಾಡಿ ಕಟ್ಟಡ ಹೀಗೆ ಅಭಿವೃದ್ದಿ ಆರಂಭಿಸಿದ್ದೇವೆ ಎಂದರು.