ಹುಲಿ ಉಗುರು ಪ್ರಕರಣ ಏಕಾಏಕಿ ಬಂಧಿಸುವುದು ಸರಿಯಲ್ಲ -ಆರಗ ಜ್ಞಾನೇಂದ್ರ

ಬೆಂಗಳೂರು;- ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹುಲಿಯುಗುರು ಮನೆಗಳಲ್ಲಿಟ್ಟುಕೊಂಡವರನ್ನು ಬಂಧಿಸುತ್ತಿದ್ರೆ ಜೈಲುಗಳೇ ಸಾಲಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೆಲವು ದಿನಗಳಿಂದ ಹುಲಿ ಉಗುರಿನ ಪೆಂಡೆಂಟ್ ಧರಿಸಿದವರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತಿದೆ. ನೂರಾರು ವರ್ಷಗಳಿಂದ ಪರಂಪರಾಗತವಾಗಿ ವನ್ಯಜೀವಿಗಳ ವಸ್ತುಗಳನ್ನು ಇಟ್ಟುಕೊಂಡಿರುವುದೇ ಅಪರಾಧ ಎನ್ನುವ ರೀತಿಯಲ್ಲಿ ಬಂಧಿಸುತ್ತಿದ್ದರೆ, ರಾಜ್ಯದ ಜೈಲುಗಳೇ ಸಾಕಾಗುವುದಿಲ್ಲ ಎಂದರು.

ಪ್ರಚಾರದ ಗೀಳಿಗೆ ಬಿದ್ದವರಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಿಂದೆ ಮುಂದೆ ಯೋಚಿಸದೇ ಬಂಧನಕ್ಕೆ ಒಳಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಕಾಡೆಮ್ಮೆ, ಕಾಡುಕೋಣ ಮತ್ತು ಜಿಂಕೆ ಕೊಂಬುಗಳನ್ನು ಅಲಂಕಾರಕ ವಸ್ತುಗಳಾಗಿ ಮನೆಯಲ್ಲಿ ಇಟ್ಟಿದ್ದಾರೆ. ಈ ಹಿಂದೆ ಕಾಡಿನಲ್ಲಿ ಸತ್ತು ಬಿದ್ದಿದ್ದ ಹುಲಿ ಮತ್ತು ಇತರ ವನ್ಯಜೀವಿಗಳ ವಸ್ತುಗಳನ್ನು ಸಂಗ್ರಹ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಅದನ್ನು ಧೈರ್ಯದ ಪ್ರತೀಕ ಎಂದು ಖರೀದಿ ಮಾಡಿ, ಪೋಷಕರು ತಮ್ಮ ಮಕ್ಕಳಿಗೆ ಹಾಕುತ್ತಿದ್ದರು.

ಇದನ್ನು ಕೆಲವರು ಚಿನ್ನದ ಪೇಡೆಂಟ್ ಮಾಡಿಕೊಂಡು ಅಲಂಕಾರಿಕವಾಗಿ ಧರಿಸುತ್ತಿದ್ದಾರೆ. ವನ್ಯಜೀವಿ ಕಾಯ್ದೆ ಬರುವ ಮೊದಲು ಸಂಗ್ರಹಿಸಿದ್ದ ವಸ್ತುಗಳನ್ನೇ ಅವರು ಧರಿಸಿದರೆ, ಅವರಿಗೆ ಜೈಲಿಗೆ ಹಾಕುವ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದರು. ಈ ಕೂಡಲೇ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಈ ಕುರಿತು ಚರ್ಚೆ, ವಿಮರ್ಶೆ ನಡೆಸಬೇಕು. ಏಕಾಏಕಿ ಯಾರನ್ನೂ ಬಂಧಿಸುವುದು ಸರಿಯಲ್ಲ. ಅರಣ್ಯ ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ಈ ಕುರಿತು ಚರ್ಚೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

Loading

Leave a Reply

Your email address will not be published. Required fields are marked *