ಕೋಲಾರ: ಕೋಲಾರ ಎಸ್ಎನ್ ಆರ್ ಜಿಲ್ಲಾ ಆಸ್ಪತ್ರೆ ಹೆರಿಗೆ ವಾರ್ಡ್ನಿಂದ ಕಳುವಾಗಿದ್ದ ನವಜಾತ ಶಿಶುವನ್ನು ಕೋಲಾರ ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಮಗು ಕಳ್ಳತನ ಮಾಡಿದ್ದ ಆರೋಪಿಗಳ ಪೈಕಿ ಓರ್ವ ಮಹಿಳೆಯನ್ನು ಬಂಧಿಸಲಾಗಿದೆ. ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ವಾರ್ಡ್ನಲ್ಲಿ ತಾಯಿ ನಿದ್ದೆ ಹೋದ ಸಂದರ್ಭದಲ್ಲಿ ಮೂವರು ಅಪರಿಚಿತ ಮಹಿಳೆಯರು ಹೊಂಚು ಹಾಕಿ ಮಗುವನ್ನು ಕದ್ದೊಯ್ದಿದಿದ್ದಾರೆ. ಮೂವರು ಮಹಿಳೆಯರು ನವಜಾತ ಗಂಡು ಶಿಶುವನ್ನು ಯಾರಿಗೂ ಗೊತ್ತಾಗದಂತೆ ಕಾಲೇಜು ಬ್ಯಾಗಿನಲ್ಲಿ ಬಚ್ಚಿಟ್ಟುಕೊಂಡು ಪರಾರಿಯಾಗಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದು ಆಟೊ ಹತ್ತುತ್ತಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ವಿಷಯ ತಿಳಿದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕೋಲಾರ ಮಹಿಳಾ ಠಾಣೆ ಪೊಲೀಸರು ತಮಿಳುನಾಡಿನ ಬೇರಿಕೆ ಬಳಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ನಾಲ್ಕು ದಿನದ ಕಂದಮ್ಮ ತಾಯಿ ಮಡಿಲು ಸೇರಿದೆ. ಮಗುವನ್ನು ಕಂಡು ತಾಯಿಯ ಕಣ್ಣೀರು ಹಾಕಿದ್ದಾರೆ. ತಾಯಿ ಮಗುವನ್ನು ಬಿಗಿದಪ್ಪಿ ಸಂತೋಷಪಟ್ಟಿದ್ದಾಳೆ. ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.