ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಡಿಲಬ್ಬರದ 95 ರನ್ ಸಿಡಿಸಿ ಟೀಮ್ ಇಂಡಿಯಾಗೆ 4 ವಿಕೆಟ್ ಗಳ ಗೆಲುವು ತಂದುಕೊಟ್ಟಿದ್ದ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
ಭಾನುವಾರ ಧರ್ಮಶಾಲಾದ ಎಚ್ ಪಿಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 274 ರನ್ ಗಳ ಕಠಿಣ ಗುರಿ ಹಿಂಬಾಲಿಸಿದ ಟೀಮ್ ಇಂಡಿಯಾಗೆ ತಮ್ಮ ಸ್ಫೋಟಕ ಆಟದಿಂದ ಆಸರೆಯಾಗಿದ್ದ ವಿರಾಟ್ ಕೊಹ್ಲಿ ಶತಕ ಸಿಡಿಸಿ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರ 49 ಒಡಿಐ ಶತಕವನ್ನು ಸರಿಗಟ್ಟುವ ಭರವಸೆ ಮೂಡಿಸಿದ್ದರು. ಆದರೆ 95 ರನ್ ಗಳಿಸಿದ್ದಾಗ ಸಿಕ್ಸರ್ ಮೂಲಕ ಶತಕ ಸಿಡಿಸಿ ಪಂದ್ಯವನ್ನು ಮುಗಿಸುವ ಆತುರದಲ್ಲಿ ಗ್ಲೆನ್ ಫಿಲಿಪ್ಸ್ ಗೆ ಕ್ಯಾಚಿತ್ತು ಮೈದಾನ ತೊರೆದಿದ್ದರು. ಆದರೆ 12 ಎಸೆತಗಳು ಬಾಕಿ ಇರುವಂತೆಯೇ ಟೀಮ್ ಇಂಡಿಯಾ ಗೆಲುವಿನ ರನ್ ಗಳಿಸಿ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು. ಟೀಮ್ ಇಂಡಿಯಾ ಗೆಲುವಿಗೆ ಕಾರಣರಾದ ವಿರಾಟ್ ಕೊಹ್ಲಿಯನ್ನು ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೋಯೆಬ್ ಅಖ್ತರ್ ಪ್ರಶಂಸಿಸಿದ್ದಾರೆ.
ತಮ್ಮದೇ ಆದ ಅಧಿಕೃತ ಯುಟ್ಯೂಬ್ ನಲ್ಲಿ ಮಾತನಾಡಿರುವ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್, ‘ವಿರಾಟ್ ಕೊಹ್ಲಿ ಒತ್ತಡದ ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಒತ್ತಡಗಳು ಆತನಿಗೆ ಸಿಡಿಲಬ್ಬರದ ಆಟ ಆಡಲು ಹೆಚ್ಚಿನ ಅವಕಾಶ ನೀಡುತ್ತದೆ. ಮತ್ತು ಇದರಿಂದ ಅವರು ಶತಕ ಹಾಗೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಾರೆ. ಆ ಮೂಲಕ ಆತನಿಗೆ ಇನ್ಸ್ಟಾಗ್ರಾಮ್ನಲ್ಲಿ ಫಾಲೋವರ್ಗಳು ಹೆಚ್ಚಾಗುತ್ತಾರೆ. ಖಂಡಿತವಾಗಿಯೂ ವಿರಾಟ್ ಇದೆಲ್ಲದಕ್ಕೂ ಅರ್ಹವಾಗಿದ್ದಾರೆ” ಎಂದು ಶೋಯೆಬ್ ಅಖ್ತರ್ ಶ್ಲಾಘಿಸಿದ್ದಾರೆ.
“ನ್ಯೂಜಿಲೆಂಡ್ ತಂಡವನ್ನು ಶುಭಮನ್ ಗಿಲ್ ಒಬ್ಬರೇ ಮಣಿಸುತ್ತಿದ್ದರು. ರೋಹಿತ್ ಶರ್ಮಾ ಲಘುವಾಗಿ ವಿಕೆಟ್ ಒಪ್ಪಿಸದಿದ್ದರೆ ಅವರು ಕೂಡ ನ್ಯೂಜಿಲೆಂಡ್ ತಂಡವನ್ನು ಮುಗಿಸುತ್ತಿದ್ದರು. ಕೆ.ಎಲ್.ರಾಹುಲ್ ಅವರು ಬಡ್ತಿ ಪಡೆದು 3 ಅಥವಾ 4ನೇ ಕ್ರಮಾಂಕದಲ್ಲಿ ಆಡಲು ಬಂದರೆ ಅವರು ಎದುರಾಳಿ ತಂಡಕ್ಕೆ ಸೋಲು ತರಬಲ್ಲರು. ಏಕೆಂದರೆ ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ ಆಪ್ ಬಹಳ ದೀರ್ಘವಾಗಿದೆ” ಎಂದು ಪಾಕ್ ವೇಗಿ ಶ್ಲಾಘಿಸಿದ್ದಾರೆ