ಬೆಂಗಳೂರು:’ ಅರ್ಜಿ ಸಲ್ಲಿಕೆಯಲ್ಲಿ ದೋಷವಿಲ್ಲ. ನಿಮ್ಮ ಹೆಸರನ್ನು ಅನುಮೋದಿಸಲಾಗಿದೆ. ಎರಡು ಸಾವಿರ ರೂ. ಪಡೆಯಲು ಅರ್ಹರಾಗಿದ್ದೀರಿ…’ – ಹೀಗೆ ಸಂದೇಶ ಬಂದು ಎರಡು ತಿಂಗಳಾದರೂ ಗೃಹಲಕ್ಷ್ಮಿ ಹಣ ಮಾತ್ರ ಬಂದಿಲ್ಲ! ಇನ್ನು ಈ ಬಗ್ಗೆ ವಿಚಾರಣೆ ಮಾಡಿದಾಗ, ಎಲ್ಲವೂ ಸರಿಯಿದ್ದು ತಾಂತ್ರಿಕ ದೋಷಗಳಿಂದ ಬಂದಿಲ್ಲವೆಂದು ಅಥವಾ ಆಧಾರ್ ಜೋಡಣೆಯಾಗಿಲ್ಲಎಂದು ಏಕ ಉತ್ತರ ಬರುತ್ತಿದೆ. ಎಲ್ಲಾ ದಾಖಲೆಗಳು ಸರಿಯಾಗಿಲ್ಲದಿದ್ದರೆ ದೃಢೀಕರಣದ ಸಂಖ್ಯೆ, ಸಂದೇಶ ಏಕೆ ಬರುತ್ತದೆ? ಕೆಲವು ಗ್ರಾಹಕರಿಗೆ ಹಣ ಕೊಟ್ಟಂತೆ ಕೊಟ್ಟು, ಇತರರ ಮೂಗಿಗೆ ಬೆಣ್ಣೆ ಸವರುವ ಕೆಲಸ ಮಾಡುತ್ತಿದೆ ಸರಕಾರ ಎಂದು ಯೋಜನೆ ವಂಚಿತ ಮಹಿಳಾ ವಲಯ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ. ಸುಮಾರು 10 ಲಕ್ಷ ಮಂದಿ ನೋಂದಾಯಿತರಿಗೆ ಹಣ ಹಾಕದೆ ತಾಂತ್ರಿಕ ದೋಷ ಮತ್ತು ದಾಖಲೆಗಳು ಸರಿಯಾಗಿಲ್ಲಎಂದು ಸರಕಾರ ನೆಪ ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಮೂರು, ನಾಲ್ಕು ಖಾತೆಗಳಿದ್ದರೆ ಅಂತಹವರಿಗೆ ಗೃಹಲಕ್ಷ್ಮಿಯ ಹಣವಿಲ್ಲ. ಅದೇ ರೀತಿ ಖಾತೆಯಿದ್ದರೂ ಒಂದೆರಡು ವರ್ಷ ಹಣದ ಚಲಾವಣೆ ಮಾಡಿಲ್ಲವೇ ಅಂತಹವರಿಗೂ ಹಣವಿಲ್ಲ. ಇಂತಹ ಲಕ್ಷಾಂತರ ಅರ್ಜಿಗಳು ಗೃಹಲಕ್ಷ್ಮಿ ಯೋಜನೆಯಿಂದ ಹೊರಗುಳಿಯುವಂತಾಗಿವೆ. ಜುಲೈನಲ್ಲಿ ನೋಂದಣಿ ಆರಂಭವಾದಾಗಲೇ ಅರ್ಜಿ ಸಲ್ಲಿಸಿದ ಲಕ್ಷಾಂತರ ಮಂದಿಗೆ ತಾಂತ್ರಿಕ ಸಮಸ್ಯೆಗಳು ಬಾಧಿಸುತ್ತಿವೆ. ಆದರೆ ಸಾಕಷ್ಟು ಜನರಿಗೆ ಮಾಹಿತಿ ಕೊರತೆಯಿಂದ ವಂಚಿತರಾಗುತ್ತಿದ್ದಾರೆ. ಅರ್ಜಿ ಸಲ್ಲಿಕೆಯಲ್ಲಿಯಾವುದೇ ದೋಷವಿಲ್ಲದಿದ್ದರೂ ವಿನಾಕಾರಣ ತಡೆಹಿಡಿಯಲಾಗಿದೆ. ಎಲ್ಲವೂ ಪಕ್ಕಾ ಇದ್ದವರಿಗೇ ಬಂದಿಲ್ಲ.
ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಿಸಿರಬೇಕು. ಕೆಲವರು ಮೂರ್ನಾಲ್ಕು ವರ್ಷಗಳ ಹಿಂದೆ ಗ್ರಾಮೀಣ ಬ್ಯಾಂಕ್ ಅಥವಾ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಖಾತೆಯನ್ನು ತೆರೆದಿರುತ್ತಾರೆ. ನಂತರ ಅದನ್ನು ಮರೆತೇಬಿಟ್ಟಿರುತ್ತಾರೆ. ಬಳಿಕ ಮತ್ತೊಂದು ಬ್ಯಾಂಕ್‌ನಲ್ಲಿ ಖಾತೆ ತೆರೆದಿರುತ್ತಾರೆ. ಇದಕ್ಕೆ ಆಧಾರ್ ಲಿಂಕ್ ಮಾಡಿಸಿರುತ್ತಾರೆ. ನಂತರ ಮತ್ತೊಂದು ಬ್ಯಾಂಕ್‌ನಲ್ಲಿ ತೆರೆದಿರುತ್ತಾರೆ. ಆದರೆ ಗೃಹಲಕ್ಷ್ಮಿ ಯೋಜನೆಯ ನೋಂದಣಿ ವೇಳೆ ಯಾವ ಬ್ಯಾಂಕ್‌ನ ಖಾತೆಯನ್ನು ತೆಗೆದುಕೊಂಡಿದೆ ಎಂಬುದು ಗ್ರಾಹಕರಿಗೆ ಗೊತ್ತಾಗುವುದಿಲ್ಲ. ಯಾಕೆಂದರೆ, ಗೃಹಲಕ್ಷ್ಮಿ ನೋಂದಣಿಗೆ ಕೇವಲ ಆಧಾರ್ ಸಂಖ್ಯೆ ಮತ್ತು ಪಡಿತರ ಚೀಟಿಯ ಸಂಖ್ಯೆಗಳೊಂದಿಗೆ ನೋಂದಾಯಿಸಲಾಗಿರುತ್ತದೆ.