ಲಕ್ನೋ: ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್ (Namaz) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರನ್ನು ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿ ನಮಾಜ್ ಮಾಡುತ್ತಿರುವುದನ್ನು ತೋರಿಸುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಹೀಗಾಗಿ ಠಾಕೂರ್ಗಂಜ್ ಪ್ರದೇಶದ ಪ್ರಾಥಮಿಕ ಶಾಲೆಯೊಂದರ ಪ್ರಾಂಶುಪಾಲ ಅಮಾನತುಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಶಾಲೆಯ ಇಬ್ಬರು ಶಿಕ್ಷಕರಿಗೂ ಎಚ್ಚರಿಕೆ ನೀಡಲಾಗಿದೆ. ಶನಿವಾರ ಕೆಲವು ಹಿಂದೂ ಸಂಘಟನೆಗಳು ಶಾಲೆಯ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು. ಈ ಕುರಿತು ಹೇಳಿಕೆ ನೀಡಿರುವ ಮೂಲ ಶಿಕ್ಷಣಾಧಿಕಾರಿ ಅರುಣ್ ಕುಮಾರ್, ಇಲ್ಲಿನ ನೇಪಿಯರ್ ರಸ್ತೆಯ ಪ್ರಾಥಮಿಕ ಶಾಲೆಯಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ಬೋಧನಾ ಕಾರ್ಯ ಹೊರತುಪಡಿಸಿ ಬೇರೆ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಬಂದಿತ್ತು.
ಶುಕ್ರವಾರ ಕೆಲವು ಮಕ್ಕಳು ನಮಾಜ್ ಮಾಡಿರುವುದನ್ನು ಶಿಕ್ಷಕರು ಖಚಿತಪಡಿಸಿದ್ದಾರೆ. ಶಾಲೆಯಲ್ಲಿ ಯಾವುದೇ ಧಾರ್ಮಿಕ ಆಚರಣೆಯು ಇಲಾಖಾ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳ ವಿರುದ್ಧವಾಗಿದೆ. ಈ ಬಗ್ಗೆ ಬ್ಲಾಕ್ ಶಿಕ್ಷಣಾಧಿಕಾರಿ ದಿನೇಶ್ ಕಟಿಯಾರ್ ಅವರು ತನಿಖೆ ನಡೆಸಿದ್ದಾರೆ ಎಂದು ಕುಮಾರ್ ತಿಳಿಸಿದ್ದಾರೆ.