ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಶಮಿ ಬೆಂಕಿ ಬೌಲಿಂಗ್ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ ಭಾರತ 274 ರನ್ಗಳಿಸಿ 4 ವಿಕೆಟ್ಗಳ ಜಯ ಸಾಧಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ಭಾರತ ಜಿಗಿತ ಕಂಡಿದೆ. ಅಲ್ಲದೇ 20 ವರ್ಷಗಳ ಬಳಿಕ ಐಸಿಸಿ ಟೂರ್ನಿಯಲ್ಲಿ ಭಾರತ ಕಿವೀಸ್ ಮಣಿಸಿ, ವಿಶೇಷ ಸಾಧನೆ ಮಾಡಿದೆ.
ಹಿಮಾಚಲ ಪ್ರದೇಶ ಧರ್ಮಶಾಲಾದ ಹೆಚ್ಪಿಸಿಎ ಕ್ರೀಡಾಂಗಣದಲ್ಲಿ ಇಂದು (ಭಾನುವಾರ) ನಡೆದ ವಿಶ್ವಕಪ್ 2023 ಟೂರ್ನಿಯ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 273 ರನ್ಗಳಿಸಿ ಆಲೌಟ್ ಆಗಿ, 274 ರನ್ ಟಾರ್ಗೆಟ್ ನೀಡಿತು. ಗುರಿ ಬೆನ್ನತ್ತಿದ ಭಾರತ, ಉತ್ತಮ ಬ್ಯಾಟಿಂಗ್ ಪ್ರದರ್ಶನದೊಂದಿಗೆ 48 ಓವರ್ಗಳಿಗೆ 274 ರನ್ ಗಳಿಸಿ 4 ವಿಕೆಟ್ಗಳ ಗೆಲುವು ದಾಖಲಿಸಿತು.
ಆರಂಭಿಕರಾಗಿ ಕಣಕ್ಕಿಳಿದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಉತ್ತಮ ಶುಭಾರಂಭ ನೀಡಿದರು. ಮೊದಲ ವಿಕೆಟ್ ನಷ್ಟಕ್ಕೆ ಈ ಜೋಡಿ 67 ಬಾಲ್ಗೆ 71 ರನ್ ಗಳಿಸಿತು. ರೋಹಿತ್ ಶರ್ಮಾ 40 ಬಾಲ್ಗಳಿಗೆ 46 ರನ್ ಗಳಿಸಿ (4 ಫೋರ್, 4 ಸಿಕ್ಸರ್) ಕ್ಲೀನ್ ಬೌಲ್ಡ್ ಆಗಿ ಅರ್ಧಶತಕ ವಂಚಿತರಾಗಿ ನಿರ್ಗಮಿಸಿದರು
ಉತ್ತಮ ಪ್ರದರ್ಶನ ನೀಡುತ್ತ ಆಟ ಆರಂಭಿಸಿದ್ದ ಗಿಲ್ (31 ಬಾಲ್ಗೆ 21 ರನ್), ಫರ್ಗೂಸನ್ ಬೌಲಿಂಗ್ನಲ್ಲಿ ಬಾಲ್ ಅನ್ನು ಬೌಂಡರಿಗೆ ಅಟ್ಟಲು ಮುಂದಾಗಿ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ದರು. 104 ಬಾಲ್ಗೆ 95 ರನ್ ಬಾರಿಸಿ (8 ಫೋರ್, 2 ಸಿಕ್ಸರ್) ಮಿಂಚಿದರು. ಕೊನೆ ವರೆಗೂ ಶತಕದ ಕುತೂಹಲ ಕೆರಳಿಸಿದ್ದ ಕೊಹ್ಲಿ ಶತಕ ವಂಚಿತರಾಗಿ ನಿರ್ಗಮಿಸಿದರು. ಇದು ಕಿಂಗ್ ಕೊಹ್ಲಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.