ಚೆನ್ನೈ: ತನಗೆ ದ್ರೋಹ ಬಗೆದಿರುವ ವ್ಯಕ್ತಿಗೆ ಪಕ್ಷದ ಕೆಲ ನಾಯಕರು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟಿ ಹಾಗೂ ಬಿಜೆಪಿ ನಾಯಕಿ ಗೌತಮಿ ತಡಿಮಲ್ಲ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ 25 ವರ್ಷಗಳ ಒಡನಾಟವನ್ನು ಕೊನೆಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ. ರಾಜೀನಾಮೆ ಪತ್ರವನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ
ಪತ್ರದಲ್ಲಿ ಅತ್ಯಂತ ಭಾರವಾದ ಹೃದಯದಿಂದ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನಾನು 25 ವರ್ಷಗಳ ಹಿಂದೆ ರಾಷ್ಟ್ರ ನಿರ್ಮಾಣಕ್ಕೆ ತನ್ನ ಪ್ರಯತ್ನಗಳನ್ನು ಕೊಡುಗೆ ನೀಡಲು ಪಕ್ಷಕ್ಕೆ ಸೇರಿದ್ದೆ. ನನ್ನ ಜೀವನದಲ್ಲಿ ನಾನು ಎದುರಿಸಿದ ಎಲ್ಲಾ ಸವಾಲುಗಳ ಹೊರತಾಗಿಯೂ, ನಾನು ಬದ್ಧತೆಯಿಂದ ನಡೆದುಕೊಂಡಿದ್ದೇನೆ. ಆದರೂ ಇಂದು ನಾನು ನನ್ನ ಜೀವನದಲ್ಲಿ ಊಹಿಸಲಾಗದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿಂತಿದ್ದೇನೆ. 2021ರ ವಿಧಾನಸಭಾ ಚುನಾವಣೆಯಲ್ಲೂ ನನಗೆ ಟಿಕೆಟ್ ನೀಡುವುದಾಗಿ ಪಕ್ಷ ಭರವಸೆ ನೀಡಿತ್ತಾದರೂ ಕೊನೇ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಇದರ ಹೊರತಾಗಿಯೂ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷ ಮತ್ತು ಮುಖಂಡರಿಂದ ಯಾವುದೇ ರೀತಿಯ ಬೆಂಬಲ ಪಡೆಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.