ಇಸ್ಲಾಮಾಬಾದ್: ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಭಯೋತ್ಪಾದಕನನ್ನು ಅಪರಿಚಿತ ಬಂದೂಕುಧಾರಿಗಳು ಪಾಕಿಸ್ತಾನದಲ್ಲಿ ಹತ್ಯೆ ಮಾಡಿದ್ದಾರೆ. ಪಾಕಿಸ್ತಾನದ ಉತ್ತರ ವಜೀರಿಸ್ತಾನ್ನಲ್ಲಿ ಭಯೋತ್ಪಾದಕ ದಾವೂದ್ ಮಲಿಕ್ನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ದಾವೂದ್ ಮಲಿಕ್, ಲಷ್ಕರ್-ಎ-ಜಬ್ಬಾರ್ ಸಂಸ್ಥಾಪಕ ಮತ್ತು ಭಾರತದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ಮೌಲಾನಾ ಮಸೂದ್ ಅಜರ್ನ ನಿಕಟ ಸಹಾಯಕ.
ದಾವೂದ್ ಮಲಿಕ್ ಖಾಸಗಿ ಕ್ಲಿನಿಕ್ನಲ್ಲಿದ್ದಾಗ ಆತನ ಮೇಲೆ ದಾಳಿ ನಡೆದಿದೆ. ಅಪರಿಚಿತ ದುಷ್ಕರ್ಮಿಗಳು ಆತನನ್ನು ಹೊಂಚು ಹಾಕಿ ಗುಂಡಿಟ್ಟು ಕೊಂದು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ನಡುವೆ ಯುದ್ಧದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದಾವೂದ್ ಮಲಿಕ್ ಉಗ್ರಗಾಮಿ ಸಿದ್ಧಾಂತಗಳ ಪ್ರಬಲ ಪ್ರತಿಪಾದಕನಾಗಿದ್ದ. ಉಗ್ರಗಾಮಿ ಸಂಘಟನೆ ಲಷ್ಕರ್-ಎ-ಜಬ್ಬಾರ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಹೀಗಾಗಿ ಭದ್ರತಾ ಏಜೆನ್ಸಿಗಳು ಈತನಿಗಾಗಿ ತೀವ್ರ ಶೋಧಕಾರ್ಯ ನಡೆಸುತ್ತಿದ್ದವು.
ಈ ಹಿಂದೆ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮತ್ತು ಎಲ್ಇಟಿ ಮುಖ್ಯಸ್ಥನ ಆಪ್ತ ಸಹಾಯಕನಾಗಿದ್ದ ಖೈಸರ್ ಫಾರೂಕ್ನನ್ನು ಕರಾಚಿಯಲ್ಲಿ ಹತ್ಯೆ ಮಾಡಲಾಗಿತ್ತು. ಈತ ಕರಾಚಿ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಅಪರಿಚಿತ ಬಂದೂಕುಧಾರಿಗಳು ದಾಳಿ ನಡೆಸಿ ಕೊಂದಿದ್ದರು. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.