ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರ ತನ್ನ ನೌಕರರಿಗೆ ದಸರಾ ಹಬ್ಬದ ಡಬಲ್ ಧಮಾಕಾ ಕೊಡುಗೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು (ಡಿ.ಎ.) ಶೇ.4ರಷ್ಟು ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಇದರ ಜೊತೆಗೆ, ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆ ಸಂಯೋಜಿತ ಬೋನಸ್ (ಪಿಎಲ್ಬಿ) ಅನ್ನು ಸಹ ಸಂಪುಟ ಅನುಮೋದಿಸಿದೆ.
ಡಿಎ ಶೇ.4 ಏರಿಕೆ:
ಕೇಂದ್ರ ಸರ್ಕಾರಿ ನೌಕರರ ಡಿ.ಎ. ಈಗ ಮೂಲವೇತನದ (ಬೇಸಿಕ್ ಪೇ) ಮೇಲೆ ಇರುವ ಶೇ.42ರಿಂದ ಶೇ.46ಕ್ಕೆ ಏರಿಕೆಯಾಗಲಿದೆ. ಈ ನಿರ್ಧಾರದಿಂದ 1 ಕೋಟಿಗೂ ಅಧಿಕ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಇದರಲ್ಲಿ ಪಿಂಚಣಿದಾರರ ಸಂಖ್ಯೆ 67.95 ಲಕ್ಷ ಹಾಗೂ ನೌಕರರ ಸಂಖ್ಯೆ 48.67 ಲಕ್ಷವಾಗಿದೆ. 2023ರ ಜು.1ರಿಂದ ಇದು ಪೂರ್ವಾನ್ವಯ ಆಗಲಿದೆ. 7ನೇ ವೇತನ ಆಯೋಗದ ಶಿಫಾರಸು ಅನುಸಾರ ಈ ಕ್ರಮ ಜರುಗಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 12,857 ಕೋಟಿ ರು. ಹೊರೆ ಬೀಳಲಿದೆ. ಡಿಎ ಪರಿಷ್ಕರಣೆಯನ್ನು ಮಾರ್ಚ್ 24ರಂದು ಕೊನೆಯ ಬಾರಿ ಮಾಡಲಾಗಿತ್ತು. ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿ ನಿರ್ಧರಿಸುತ್ತದೆ.
ವೇತನ ಎಷ್ಟು ಹೆಚ್ಚಾಗುತ್ತದೆ?:
ಶೇ.4ರಷ್ಟು ಡಿಎ ಹೆಚ್ಚಳ ಆಗಿರುವುದರಿಂದ ಸಂಬಳ ಎಷ್ಟು ಏರಬಹುದೆಂಬ ಲೆಕ್ಕಾಚಾರ ಇಲ್ಲಿದೆ. ನೌಕರರೊಬ್ಬರ ಒಟ್ಟು ವೇತನವು ತಿಂಗಳಿಗೆ 50,000 ರು. ಆಗಿದ್ದರೆ ಮೂಲ ವೇತನವಾಗಿ ಸುಮಾರು 15,000 ರು. ಪಡೆಯುತ್ತಿರುತ್ತಾರೆ. ಈವರೆಗೆ ಮೂಲವೇತನದ ಮೇಲೆ ಶೇ.42ರಷ್ಟು ಡಿಎ ಇತ್ತು. ಹೀಗಾಗಿ ಅವರು 6300 ರು. ಡಿಎ ಪಡೆಯುತ್ತಿದ್ದರು. ಈಗ ಡಿಎ ಶೇ.42ರಿಂದ ಶೇ.46ಕ್ಕೆ ಏರಿರುವ ಕಾರಣ ನೌಕರನು ತಿಂಗಳಿಗೆ 6,900 ರು. ಡಿಎ ಪಡೆಯುತ್ತಾನೆ. ಅಂದರೆ 50 ಸಾವಿರ ರು. ಬದಲು ಇನ್ನು 50,600 ರು. ವೇತನ ಪಡೆಯುತ್ತಾನೆ.
ರೈಲ್ವೆ ನೌಕರರಿಗೆ ಬೋನಸ್
ರೈಲ್ವೆ ನೌಕರರಿಗೆ 78 ದಿನಗಳ ವೇತನದ ಸಮನಾದ ಬೋನಸ್ ನೀಡಲು ನಿರ್ಧರಿಸಲಾಗಿದೆ. ಇದರಿಂದ ಇಲಾಖೆಯ 11.07 ಲಕ್ಷ ಗೆಜೆಟೆಡ್ ಅಲ್ಲದ ನೌಕರರಿಗೆ ಅನುಕೂಲವಾಗಲಿದೆ. ರೈಲ್ವೆ ಇಲಾಖೆಗೆ ವಾರ್ಷಿಕ 1,968.87 ಕೋಟಿ ರು. ಹೊರೆ ಬೀಳಲಿದೆ

Loading

Leave a Reply

Your email address will not be published. Required fields are marked *