ಬೆಂಗಳೂರು;- ಅಕ್ಟೋಬರ್ 1ರಿಂದ ರಾಜ್ಯದ ಕೆಲವು ಕಡೆಗಳಲ್ಲಿ ಮಳೆಯ ದರ್ಶನವಾಯಿತು. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಿದ್ದು, ವಾಡಿಕೆ ಯಷ್ಟು ಆಗಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕಚೇರಿ ವಿಜ್ಞಾನಿ ಡಾ.ಪ್ರಸಾದ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ನಿರೀಕ್ಷಿತ ಮುಂಗಾರು ಮಳೆ ಬಾರದೇ ಬರಗಾಲ ಉಂಟಾಯಿತು. ಹಿಂಗಾರು ಮಳೆ ಉತ್ತಮವಾಗಿ ಸುರಿಯಲಿದೆ ಎಂದು ಹೇಳಲಾಗಿತ್ತು. ಆದರೆ ಅಕ್ಟೋಬರ್ 1ರಿಂದ ಆರಂಭವಾಗಬೇಕಾದ ಹಿಂಗಾರು ಮಳೆ ಸಹ ವಿಳಂಬವಾಯಿತು. ಇದರಿಂದಾಗಿ ಕಳೆದ 20 ದಿನಗಳಲ್ಲಿ ಕರ್ನಾಟಕದಲ್ಲಿ 53% ರಷ್ಟು ಮಳೆ ಕೊರತೆ ಆಗಿದೆ.
ಈ ಕಾರಣದಿಂದ ಕರ್ನಾಟಕದಲ್ಲಿ ಅಕ್ಟೋಬರ್ 1ರಿಂದ 20ರವರೆಗೆ ಶೇಕಡಾ 53 ರಷ್ಟು ಮಳೆಯ ಕೊರತೆ ಉಂಟಾಗಿದೆ. ಈ ಪೈಕಿ ಉತ್ತರ ಒಳನಾಡಿನಲ್ಲಿ ಅತ್ಯದಿಕ ಮಳೆ ಕೊರತೆ ಕಂಡು ಬಂದಿದೆ. ಅಲ್ಲಿ ದಿನವಿಡೀ ಶುಷ್ಕ ವಾತಾವರಣ ನಿರ್ಮಾಣವಾಗಿದೆ. ರೈತರು ಮಳೆಗೆ ಕಾದು ಕಾದು ಹೈರಾಣಾಗಿದ್ದಾರೆ. ನಿರೀಕ್ಷಿತ ಮಳೆ ಎಂಬ ಪಟ್ಟಿಯಿಂದ ಮೂರು ಜಿಲ್ಲೆಗಳು ಮಾತ್ರ ಹೊರ ಗುಳಿದಿವೆ. ಅಂದರೆ ಅಲ್ಲಿ ವಾಡಿಕೆ ಗಿಂತ ಅತ್ಯಧಿಕ ಮಳೆ ಆಗಿದೆ. ಉಳಿದಂತೆ ಎಲ್ಲಡೆ ಬರಗಾಲ ಛಾಯೆ ಆವರಿಸಿದೆ.
ಕರ್ನಾಟಕದಲ್ಲಿ ಒಟ್ಟು ಮಳೆ ಕೊರತೆ ಪೈಕಿ ಕರಾವಳಿ ಭಾಗದಲ್ಲಿ ಶೇಕಡಾ 23 ರಷ್ಟು ಮಳೆ ಕೊರತೆ ಉಂಟಾಗಿದೆ. ಇನ್ನೂ ಉತ್ತರ ಒಳನಾಡಿಗೆ ಅಧಿಕ ಶೇಕಡಾ 88 ರಷ್ಟು ಮಳೆ ಆಭಾವ ಸೃಷ್ಟಿಯಾಗಿದೆ. ಇನ್ಣು ದಕ್ಷಿಣ ಒಳನಾಡಿನಲ್ಲಿ ಶೇಕಡಾ 37 ಮಳೆ ಕೊರತೆ ಆಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ದಕ್ಷಿಣ ಒಳನಾಡಿನ ವ್ಯಾಪ್ತಿಗೆ ಬರುವ ಮೈಸೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆ ದಾಖಲಾಗಿದೆ. ರಾಜ್ಯಾದ್ಯಂತ ಮಳೆ ಕೊರತೆ ಮಧ್ಯೆ ಅಕ್ಟೋಬರ್ ತಿಂಗಳ ಕಳೆದ 20 ದಿನಗಳಲ್ಲಿ ಈ ಜಿಲ್ಲೆಗಳು ವಾಡಿಕೆಗಿಂತ ಹೆಚ್ಚು ಮಳೆ ಪಡೆದ ಜಿಲ್ಲೆಗಳಾಗಿವೆ.
ಮೈಸೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಶೇಕಡಾ 86ರಷ್ಟು ಅಧಿಕ ಮಳೆ ಸುರಿದರೆ, ಇತ್ತ ಕೊಡಗಿನಲ್ಲಿ ಶೇಕಡಾ 51ರಷ್ಟು ಮತ್ತು ಹಾಸನ ಜಿಲ್ಲೆಯಲ್ಲಿ ಶೇಕಡಾ 39ರಷ್ಟು ಅತ್ಯಧಿಕ ಮಳೆ ದಾಖಲಾಗಿದೆ. ಉಳಿದೆಡೆ ವಾಡಿಕೆಗಿಂತ ಅತೀ ಕಡಿಮೆ ಮಳೆ ಆಗಿದೆ. ಉತ್ತರ ಒಳನಾಡಿನಲ್ಲಿ ಶುಷ್ಕ ವಾತಾವರಣ ಮುಂದುವರಿದಿದೆ ಎಂದು ಡಾ.ಪ್ರಸಾದ್ ಮಾಹಿತಿ ನೀಡಿದ್ದಾರೆ.