ಬೆಂಗಳೂರು;- ಆಸ್ಟ್ರೆಲಿಯಾ ಮತ್ತು ಪಾಕಿಸ್ತಾನ ತಂಡಗಳು ಏಕದಿನ ವಿಶ್ವಕಪ್ನಲ್ಲಿ ಶುಕ್ರವಾರ ಉದ್ಯಾನನಗರಿಯಲ್ಲಿ ಮುಖಾಮುಖಿ ಆಗಲಿವೆ. ಪಾಕಿಸ್ತಾನ ತಂಡ ಬರೋಬ್ಬರಿ 11 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪಂದ್ಯ ಆಡಲಿದೆ. 2012ರ ಡಿಸೆಂಬರ್ 25ರಂದು ಕೊನೆಯದಾಗಿ ಭಾರತದ ವಿರುದ್ಧ ಟಿ20 ಪಂದ್ಯ ಆಡಿದ್ದ ಪಾಕ್ ಅದರಲ್ಲಿ ಗೆಲುವು ಸಾಧಿಸಿತ್ತು.
ಪಾಕ್ ತಂಡ 24 ವರ್ಷಗಳ ಹಿಂದೆ ಅಂದರೆ 1999ರಲ್ಲಿ ಕೊನೆಯದಾಗಿ ಬೆಂಗಳೂರಿನಲ್ಲಿ ಭಾರತದ ವಿರುದ್ಧ ಏಕದಿನ ಪಂದ್ಯವಾಡಿದಾಗಲೂ ಗೆಲುವು ಸಾಧಿಸಿತ್ತು. ಅದಕ್ಕೆ ಮುನ್ನ 1996ರ ವಿಶ್ವಕಪ್ ಕ್ವಾರ್ಟರ್ಫೈನಲ್ನಲ್ಲಿ ಆಡಿದಾಗ ಪಾಕ್ ತಂಡ ಭಾರತಕ್ಕೆ ಶರಣಾಗಿತ್ತು. ಇನ್ನು ಟೆಸ್ಟ್ನಲ್ಲಿ 5 ಬಾರಿ ಬೆಂಗಳೂರಿನಲ್ಲಿ ಆಡಿರುವ ಪಾಕ್, 2ರಲ್ಲಿ ಗೆದ್ದು, 3ರಲ್ಲಿ ಡ್ರಾ ಸಾಧಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣ 4ನೇ ಬಾರಿ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಮುನ್ನ 1987 ಮತ್ತು 1996ರಲ್ಲಿ ಭಾರತದಲ್ಲಿ ವಿಶ್ವಕಪ್ ನಡೆದಾಗ ತಲಾ 1 ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಚಿನ್ನಸ್ವಾಮಿ ಸ್ಟೇಡಿಯಂ, 2011ರಲ್ಲಿ 5 ಪಂದ್ಯಗಳನ್ನು ಆಯೋಜಿಸಿತ್ತು. ಈ ಸಲವೂ ಮತ್ತೆ 5 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. 1996ರಲ್ಲಿ ಭಾರತ&ಪಾಕ್ ನಡುವೆ ನಡೆದ ಕ್ವಾರ್ಟರ್ಫೈನಲ್ ಪಂದ್ಯ ಬೆಂಗಳೂರಿನಲ್ಲಿ ಮೊದಲ ಅಹರ್ನಿಶಿ ಪಂದ್ಯವೂ ಆಗಿತ್ತು.