ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಬೆಳ್ಳಂಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ನಿರ್ಮಾಣಗಳನ್ನು ತೆರವುಗೊಳಿಸಿ ಪ್ರಾಧಿಕಾರದ ಆಸ್ತಿಯನ್ನು ವಶ ಪಡಿಸಿಕೊಳ್ಳಲಾಗಿದೆ.ಕೊಡಿಗೇಹಳ್ಳಿ ಗ್ರಾಮದ ಸರ್ವೆ ನಂ. 108ರಲ್ಲಿನ 5 ಎಕರೆ ಪ್ರದೇಶವನ್ನು ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಸ್ವಾಧೀನಪಡಿಸಿಕೊಂಡಿದ್ದು,
ಈ ಪ್ರದೇಶದ ಪೈಕಿ 3 ಎಕರೆ 35 ಗುಂಟೆಯಲ್ಲಿ ರೆವಿನ್ಯೂ ನಿವೇಶನಗಳನ್ನು ರಚಿಸಲಾಗುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ಅನೇಕ ಬಾರಿ ನೋಟೀಸ್ ಗಳನ್ನು ನೀಡಿದ್ದರೂ ಸಹ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಇಂದು ಬೆಳಿಗ್ಗೆ 3 ಎಕರೆ 35 ಗುಂಟೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ 7 ಶೆಡ್ ಹಾಗೂ 3 ಕಾಂಕ್ರೀಟ್ ಕಟ್ಟಡವನ್ನು ತೆರವುಗೊಳಿಸಿ, ಪ್ರಾಧಿಕಾರವು ಸುಮಾರು 25 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಅಲ್ಲದೇ ಇವರ ವಿರುದ್ಧ ಭೂಕಬಳಿಕೆ ಕೇಸನ್ನು ದಾಖಲಿಸಲಾಗಿದೆ.