ಬಾಗಲಕೋಟೆ: ಮೋದಿಯನ್ನು ಮತ್ತೆ ಆರಿಸಿ ತಂದರೆ (ಲೋಕಸಭೆ ಚುನಾವಣೆ) ನೀವು ಉಳಿತೀರಿ, ಇಲ್ಲ ನೀವ್ಯಾರೂ ಉಳಿಯಲ್ಲ ಎಂದು ಬಾಗಲಕೋಟೆ (Bagalkote) ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಮಹಾಲಿಂಗಪುರ ಪಟ್ಟಣದವರಾದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ ರಾಜಕೀಯ ವಿದ್ಯಮಾನದ ಬಗ್ಗೆ ಹೇಳಿಕೆ ನೀಡಿ ಭಾರೀ ಸುದ್ದಿಯಾಗಿದ್ದಾರೆ. ಸ್ವಾಮೀಜಿ ಹೇಳಿದ ವಿಡಿಯೋ ತುಣುಕು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ನವರಾತ್ರಿ ದೀಪೋತ್ಸವದ ವೇಳೆ ಸ್ವಾಮೀಜಿ ಆಡಿದ ಜಟ ಭವಿಷ್ಯ ಇದಾಗಿದ್ದು, ಕೈಯಲ್ಲಿ ಜಟ ಹಿಡಿದು ಜಟವಾಣಿ ನುಡಿದಿದ್ದಾರೆ. ಮೂಲ ಮಹಾಲಿಂಗೇಶ್ವರ ಸ್ವಾಮೀಜಿ ಅವರ ಜಟ (ಕೂದಲು) ಪ್ರತಿ ವರ್ಷ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಸ್ವಾಮೀಜಿ ಜಟ ಹಿಡಿದು ಹೇಳುವ ಭವಿಷ್ಯ ನಿಜ ಎಂಬುದು ಇಲ್ಲಿಯ ಭಕ್ತರ ನಂಬಿಕೆಯಾಗಿದೆ. ಅದರಂತೆ ಭಾನುವಾರ ದೀಪೋತ್ಸವದ ವೇಳೆ ಸ್ವಾಮೀಜಿ ಜಟ ಹಿಡಿದು, ಇದರ ಮೇಲೆ ಏನಾದರೂ ವ್ಯತ್ಯಾಸ ಮಾಡಿದರೆ ಹಾಳಾಗುವ ಕಾಲ ಬರುತ್ತದೆ. ಮೋದಿಯನ್ನು ಮತ್ತೆ ಆರಿಸಿ ತಂದರೆ ನೀವು ಉಳಿತೀರಿ, ಇಲ್ಲ ನೀವ್ಯಾರೂ ಉಳಿಯಲ್ಲ ಎಂದು ಆಡಿದ ಮಾತು ಸದ್ಯ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಸ್ವಾಮೀಜಿಯ ಈ ಹೇಳಿಕೆ ಬಗ್ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.