ಬೆಳಗಾವಿ: ಬೆಳಗಾವಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರಿಗೆ ಚಪ್ಪಲಿ ಹಾರ ಹಾಕಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಲಾಗಿದೆ. ಯುವಕರನ್ನು ಹನಿಟ್ರ್ಯಾಪ್ ಗೆ ಬೀಳಿಸಿ ಹಣ ವಸೂಲಿ ಮಾಡಿದ ಆರೋಪ ಹೊರಿಸಿ ಸ್ಥಳೀಯರು ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದಾರೆ. ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ್ ತಾಲೂಕಿನ ಘಟಪ್ರಭಾದ ಮಲ್ಲಾಪುರ ಪಿಜಿಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.
ಸ್ಥಳೀಯ ಕೆಲ ಪುರುಷರು ಮತ್ತು ಮಹಿಳೆಯರ ಗುಂಪು ಸಂತ್ರಸ್ತ ಮಹಿಳೆಯನ್ನು ಮನೆಯಿಂದ ಎಳೆದು ತಂದು ಮಲ್ಲಾಪುರ ಪಿಜಿಯ ಮೃತ್ಯುಂಜಯ ಸರ್ಕಲ್ ಬಳಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಬಳಿಕ ನಮಗೆ ನ್ಯಾಯ ಬೇಕು ಎಂದು ಘೋಷಣೆ ಕೂಗಿ ಮಹಿಳೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಸ್ಥಳೀಯರು ಮಹಿಳೆಯ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ತಿಳಿದು ಬಂದಿದೆ.