ಇಸ್ಲಾಮಾಬಾದ್: ಭಾರತ (India) ಮತ್ತು ಹಿಂದೂ ವಿರೋಧಿ (Anti Hindu) ಟ್ವೀಟ್ ಮಾಡಿದ್ದಕ್ಕೆ ಪಾಕಿಸ್ತಾನ (Pakistan) ಕ್ರೀಡಾ ಪತ್ರಕರ್ತೆ ಝೈನಾಬ್ ಅಬ್ಬಾಸ್ಳನ್ನು (Zainab Abbas) ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿದೆ ಎಂಬ ಸುದ್ದಿ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ಚರ್ಚೆಗಳು ಹುಟ್ಟಿಕೊಂಡ ನಾಲ್ಕು ದಿನಗಳ ಬಳಿಕ ಪಾಕ್ ನಿರೂಪಕಿ ಕ್ಷಮೆಯಾಚಿಸಿದ್ದಾಳೆ. ನನ್ನ ಅನಿರೀಕ್ಷಿತ ಹೇಳಿಕೆಗಳಿಂದ ನೋವುಂಟಾಗಿದ್ದರೆ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂಬುದಾಗಿ ಆಕೆ ತನ್ನ ಟ್ವಿಟ್ಟರ್ (X) ಖಾತೆಯಲ್ಲಿ ಬರೆದುಕೊಂಡಿದ್ದಾಳೆ.
ನಾನು ತುಂಬಾ ಅದೃಷ್ಟಶಾಲಿ, ನನ್ನಿಷ್ಟದ ಕ್ರೀಡೆಯನ್ನ ನಿರೂಪಣೆ ಮಾಡುವುದಕ್ಕೆ ಹಾಗೂ ಅದಕ್ಕಾಗಿ ಪ್ರಯಾಣ ಮಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ನಾನು ಕೃತಜ್ಞಳಾಗಿರುತ್ತೇನೆ. ಪ್ರತಿದಿನ ನಾನು ಎಲ್ಲರೊಟ್ಟಿಗೂ ಹರ್ಷದಿಂದಲೇ ಸಂವಾದ ಮಾಡುತ್ತಿದ್ದೇನೆ. ನನ್ನನ್ನ ಯಾರು ನಿರೂಪಣೆಯಿಂದ ತೆಗೆದುಹಾಕಿಲ್ಲ. ಗಡಿಪಾರು ಮಾಡಿರುವುದಾಗಿಯೂ ಹೇಳಿಲ್ಲ. ಆದ್ರೆ ಆನ್ಲೈನ್ನಲ್ಲಿ ಹರಿದಾಡುತ್ತಿದ್ದ ಕಾಮೆಂಟ್ಗಳನ್ನು ನೋಡಿ ವಿಚಲಿತಳಾದೆ. ಜೊತೆಗೆ ತುಂಬಾ ಭಯವೂ ಆಗಿತ್ತು.
ನನ್ನ ಸುರಕ್ಷತೆಗೆ ಯಾವುದೇ ಆತಂಕ ಇಲ್ಲದಿದ್ದರೂ ನನ್ನ ಕುಟುಂಬ ಮತ್ತು ನನ್ನ ಸ್ನೇಹಿತರು ಆತಂಕಗೊಂಡಿದ್ದರು. ಆದ್ದರಿಂದ ನನಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ಆಗಲಿಲ್ಲ. ಏನಾಯಿತು ಅಂತಾ ತಿಳಿದುಕೊಳ್ಳಲು ಸ್ವಲ್ಪ ಸಮಯ ಬೇಕಾಗಿತ್ತು ಎಂದು ಹೇಳಿದ್ದಾರೆ. ನನ್ನ ಟ್ವೀಟ್ ಪೋಸ್ಟ್ಗಳಿಂದ ಯಾರ ಮನಸ್ಸಿಗಾದರೂ ನೋವುಂಟು ಮಾಡಿದ್ದರೆ, ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ. ಇದರೊಂದಿಗೆ ಸವಾಲಿನ ಸಮಯದಲ್ಲಿ ನನ್ನ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಕೃತಜ್ಞಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.