ICC World Cup: ಇಂಡೋ-ಪಾಕ್ ಪಂದ್ಯದ 10 ಸೆಕೆಂಡ್ ಜಾಹೀರಾತಿನ ರೇಟ್ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

ಅಹಮದಾಬಾದ್: ಏಕದಿನ ವಿಶ್ವಕಪ್ (ICC World Cup) ಟೂರ್ನಿಯಲ್ಲಿ ಅಕ್ಟೋಬರ್ 14ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಆದ್ರೆ ಪಂದ್ಯದ ನಡುವೆ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುವ ಜಾಹೀರಾತಿನ (Advertisement) ಮೌಲ್ಯ ಕೇಳಿದ್ರೆ ನಿಜಕ್ಕೂ ಎದೆ ಬಡಿತ ಹೆಚ್ಚಿಸುತ್ತೆ. ಏಕೆಂದರೆ ಪ್ರತಿ 10 ಸೆಕೆಂಡ್ ಜಾಹೀರಾತಿಗೆ ಬರೋಬ್ಬರಿ 25 ರಿಂದ 30 ಲಕ್ಷ ರೂ. ನಿಗದಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಟಿ20 ವಿಶ್ವಕಪ್ ಟೂರ್ನಿ ಬಳಿಕ ಡಿಸ್ನಿ ಪ್ಲಸ್ ಹಾಟ್ಸ್ಟಾರ್ (Disney Hot Star) ಸಂಸ್ಥೆಯ ಪ್ರಸಾರ ಒಪ್ಪಂದ ಮುಕ್ತಾಯಗೊಳ್ಳಲಿದೆ. ಆದ್ದರಿಂದ ಡಿಸ್ನಿ ಸ್ಟಾರ್ ಈ ಪಂದ್ಯದ ಸಂಪೂರ್ಣ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ಪಂದ್ಯದ ವೇಳೆ ಪ್ರಸಾರಗೊಳ್ಳುವ ಪ್ರತಿ 10 ಸೆಕೆಂಡ್ ಜಾಹೀರಾತಿಗೆ ಬರೋಬ್ಬರಿ 25 ರಿಂದ 30 ಲಕ್ಷ ರೂ. ನಿಗದಿಪಡಿಸಲಾಗಿದೆ. ಭಾರತದ ಇತರ ಪಂದ್ಯಗಳ ವೇಳೆ 10 ಸೆಕೆಂಡ್ ಜಾಹೀರಾತಿನ ಸ್ಲಾಟ್ಗೆ ಅಂದಾಜು 10 ಲಕ್ಷ ರೂ. ನಿಗದಿ ಮಾಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆರಂಭದಲ್ಲಿ ಉಭಯ ತಂಡಗಳ ಈ ಪಂದ್ಯದ ವೇಳೆ ಪ್ರತಿ 10 ಸೆಕೆಂಡ್ ಜಾಹೀರಾತಿಗೆ 17 ರಿಂದ 18 ಲಕ್ಷ ರೂ. ಮೊತ್ತ ನಿಗದಿ ಪಡಿಸಲಾಗಿತ್ತು. ಆದ್ರೆ ಬೇಡಿಕೆ ಹೆಚ್ಚಾಗಿದ್ದರಿಂದ ಸಂಸ್ಥೆ ಇದರ ಲಾಭ ಪಡೆಯಲು ಉದ್ದೇಶಿಸಿದ್ದು, ಜಾಹೀರಾತಿನ ಮೌಲ್ಯವನ್ನು 25 ರಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಏಷ್ಯಾಕಪ್ ಟೂರ್ನಿ ವೇಳೆಯೂ ಜಿಯೋ ಆಪ್ ಇಷ್ಟೇ ಪ್ರಮಾಣದ ದರವನ್ನು ನಿಗದಿ ಮಾಡಿತ್ತು.
ಈಗಾಗಲೇ ಈ ಪಂದ್ಯವನ್ನು ಕಣ್ತುಂಬಿಕೊಳ್ಳುವ ನಿಟ್ಟಿನಲ್ಲಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಅಹಮದಾಬಾದ್ನ ಬಹುತೇಕ ಹೋಟೆಲ್ಗಳು ಬುಕ್ ಆಗಿವೆ. ಕೆಲವು ಹೋಟೆಲ್ಗಳು 2 ದಿನಕ್ಕೆ ಸುಮಾರು 1 ಲಕ್ಷ ರೂ.ವರೆಗೂ ವಿಧಿಸಿತ್ತು. ಆದರೂ ಬಹುತೇಕ ಹೋಟೆಲ್ಗಳು ಈಗಾಗಲೇ ಹೌಸ್ಫುಲ್ ಆಗಿದೆ. ಸಾಮಾನ್ಯ ದಿನಗಳಲ್ಲಿ ನಗರದ ಐಷಾರಾಮಿ ಹೋಟೆಲ್ಗಳ ದರ ಪ್ರತಿದಿನಕ್ಕೆ 5 ರಿಂದ 8 ಸಾವಿರ ಇರುತ್ತದೆ. ಆದರೆ ಭಾರತ ಮತ್ತು ಪಾಕ್ ಪಂದ್ಯ ನಡೆಯುವ ದಿನದಂದು ದರ 40,000 ರೂ.ಗೆ ಜಿಗಿದಿದೆ.
ಕಡಿಮೆ ಖರ್ಚಿನ ಹೋಟೆಲ್ಗಳೂ ಲಭ್ಯವಿದ್ದು, ಅಭಿಮಾನಿಗಳು ದಾಂಗುಡಿಯಿಡುತ್ತಿದ್ದಾರೆ. ಈ ಮೊದಲು ಇಂಡೋ ಪಾಕ್ ಕದನ ಅಕ್ಟೋಬರ್ 15 ರಂದು ನಿಗದಿಯಾಗಿತ್ತು. ಆದ್ರೆ ಅಂದು ನವರಾತ್ರಿ ಉತ್ಸವ ಆರಂಭದ ದಿನವಾದ್ದರಿಂದ ಭದ್ರತಾ ಸಮಸ್ಯೆ ಎದುರಾಗಬಹುದು ಎಂದು ಭದ್ರತಾ ಏಜೆನ್ಸಿಗಳು ಸಲಹೆ ನೀಡಿತ್ತು. ಈ ಕಾರಣದಿಂದ ಪಂದ್ಯದ ದಿನಾಂಕವನ್ನು ಬದಲಿಸಿ ಅಕ್ಟೋಬರ್ 14ಕ್ಕೆ ನಿಗದಿ ಮಾಡಲಾಗಿದೆ.

Loading

Leave a Reply

Your email address will not be published. Required fields are marked *