ಮಾಜಿ ಸಚಿವ ಎಚ್.ಡಿ. ರೇವಣ್ಣ ಆಪ್ತನ ಮೇಲೆ ದುಷ್ಕರ್ಮಿಗಳ ದಾಳಿ

ಹಾಸನ: ಮಾಜಿ ಸಚಿವ ಎಚ್.ಡಿ. ರೇವಣ್ಣ ಆಪ್ತ ಹಾಗೂ ಗುತ್ತಿಗೆದಾರನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಬಳಿ ನಡೆದಿದೆ. ಈ ವೇಳೆ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಪ್ರಾಣ ಉಳಿಸಿಕೊಂಡಿದ್ದಾರೆ.

ಗುತ್ತಿಗೆದಾರ ಅಶ್ವತ್ ದಾಳಿಗೊಳಗಾದವರು. ಇವರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಆಪ್ತರಾಗಿದ್ದಾರೆ. ಕೆಲಕಾಲ ಎಚ್.ಡಿ.ರೇವಣ್ಣ ಅವರ ನಿವಾಸದಲ್ಲಿದ್ದು ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ ಫಾರ್ಚುನರ್ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಅಶ್ವತ್ ಅವರು ಮನೆಗೆ ಹೊರಟಿದ್ದ ಬಗ್ಗೆ ಮಾಹಿತಿ ಪಡೆದ ಐದಾರು ದುರುಳರು, ಸೂರನಹಳ್ಳಿ ಹಂಪ್ಸ್ ಬಳಿ ಕಾರಿನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಕಲ್ಲು ತೂರಾಟ ಮಾಡಿದ್ದಾರೆ. ಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತಿಹಾಕಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಮುಂದಾಗಿದ್ದಾರೆ. ಕೂಡಲೇ ಕಾರು ರಿವರ್ಸ್ ತೆಗೆದು ಗುತ್ತಿಗೆ ದಾರ ಎಸ್ಕೆಪ್ ಆಗಿದ್ದಾರೆ. ಈ ವೇಳೆ ಮೂಡಲಹಿಪ್ಪೆ ಗ್ರಾಮದವರೆಗೂ ಕಾರನ್ನು ಹಿಂಬಾಲಿಸಿದ್ದಾರೆ. ನಂತರ ಗುತ್ತಿಗೆದಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.

ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಅಶ್ವತ್ ದೂರು ನೀಡಿದ್ದು, ಸ್ಥಳಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದರು. ನಂತರ ವಿಶೇಷ ತಂಡಗಳನ್ನು ರಚನೆ ಮಾಡಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಘಟನಾ ಸ್ಥಳದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

Loading

Leave a Reply

Your email address will not be published. Required fields are marked *