ದಾವಣಗೆರೆ : ಮತಾಂಧತೆಯ ವರ್ತನೆ ತೋರಿಸುವವರನ್ನು ಮತ್ತು ದೌರ್ಜನ್ಯಕ್ಕೆ ಒಳಗಾದವರನ್ನು ಒಂದೇ ತಕ್ಕಡಿಯಲ್ಲಿ ತೂಗುವ ಮೂಲಕ ಕಾಂಗ್ರೆಸ್ ಸರಕಾರ ಮಾರ್ಜಾಲ ನ್ಯಾಯ ಅನುಸರಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ಶಿವಮೊಗ್ಗ ಗಲಭೆ ಪ್ರಕರಣದಲ್ಲಿ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳದೆ, ದೌರ್ಜನ್ಯಕ್ಕೊಳಗಾದವರ ವಿರುದ್ಧ ಕೇಸು ದಾಖಲಿಸಿದೆ. ಇದರಿಂದ ಮತಾಂಧತೆಗೆ ಸರಕಾರವೇ ಕುಮ್ಮಕ್ಕು ನೀಡುವಂತಾಗುತ್ತದೆ.
ಎರಡೂ ಕೋಮಿನವರನ್ನು ಸಮಾಧಾನ ಪಡಿಸುವುದನ್ನು ಬಿಟ್ಟು ಸರಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ‘ಈದ್ ಮಿಲಾದ್ ಮೆರವಣಿಗೆಯಲ್ಲಿ ಔರಂಗಜೇಬ, ಟಿಪ್ಪು ಸುಲ್ತಾನ್ ಫೋಟೋ ಹಾಕಲು ಅವಕಾಶ ಕೊಟ್ಟಿದ್ದೇ ತಪ್ಪು. ಹಿಂದೂಗಳ ಮೇಲೆ ದೌರ್ಜನ್ಯ ಮಾಡಿದ ಮತಾಂಧರ ವೈಭವೀಕರಣ ಮಾಡಲು ಬಿಟ್ಟಿದ್ದರ ಉದ್ದೇಶವಾದರೂ ಏನು? ಘಟನೆಗೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ ತಲೆ ಕೆಟ್ಟವರ ರೀತಿಯಲ್ಲಿ ಮಾತನಾಡಬಾರದು’ ಎಂದು ಹೇಳಿದರು.