ಚಿತ್ರದುರ್ಗ,ಅ. 06- ಕಳೆದ ಆಗಸ್ಟ್ 1 ರಂದು ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ 240 ಜನರು ಅಸ್ವಸ್ಥರಾಗಿ 6 ಜನರು ಮೃತಪಟ್ಟಿದ್ದು, ಇವರೆಲ್ಲರೂ ಪರಿಶಿಷ್ಟ ಜಾತಿ ಹಾಗೂ ದುರ್ಬಲ ವರ್ಗಕ್ಕೆ ಸೇರಿದವರಾಗಿದ್ದಾರೆ. ಘಟನೆ ಬಗ್ಗೆ ತಿಳಿದ ತಕ್ಷಣ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕರೆ ಮಾಡಿ ತುರ್ತಾಗಿ ಸ್ಪಂದಿಸುವಂತೆ ಸೂಚನೆ ನೀಡಿದ್ದೆ. ಸರ್ಕಾರ ಇಲ್ಲಿನ ಜನರ ಪರವಾಗಿ ಇದ್ದು, ಮೃತರ ಕುಟುಂಬಕ್ಕೆ ಉದ್ಯೋಗ, ಸಂತ್ರಸ್ತರಿಗೆ ನಿವೇಶನ ಹಾಗೂ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದರು.
ಇಂದು ಚಿತ್ರದುರ್ಗ ನಗರದ ಕವಾಡಿಗರಹಟ್ಟಿಗೆ ಭೇಟಿ ನೀಡಿ ಮಾತನಾಡಿದ ಅವರು, ಕವಾಡಿಗರ ಹಟ್ಟಿ ನಿವಾಸಿಗಳಿಗೆ ನಿವೇಶನ ನೀಡಲು 3 ಎಕರೆ ಜಮೀನಿನು ಮಂಜೂರು ಮಾಡಲಾಗಿದೆ. ಅಭಿವೃದ್ಧಿಗಾಗಿ ರೂ.4 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ನಿವಾಸಿಗಳಿಗೆ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಮೃತರ ಕುಟುಂಬಕ್ಕೆ ಸರ್ಕಾರದಿಂದ ರೂ.5 ಲಕ್ಷ ಹಾಗೂ ನಗರ ಸಭೆಯಿಂದ ರೂ.5 ಲಕ್ಷ ಸೇರಿದಂತೆ ತಲಾ ರೂ.10 ಲಕ್ಷ ಪರಿಹಾರ ನೀಡಲಾಗಿದೆ ಎಂದರು.
ಕಲುಷಿತ ನೀರು ಸರಬಾರಜು : ಅಧಿಕಾರಿಗಳೇ ನೇರ ಹೊಣೆ
ಸರ್ಕಾರಕ್ಕೆ ಶುದ್ಧ ಕುಡಿಯುವ ನೀರು ಕೊಡುವ ಜವಾಬ್ದಾರಿ ಇದೆ. ಕಲುಷಿತ ನೀರು ಸರಬರಾಜು ಆಗಿ ಜನರಿಗೆ ತೊಂದರೆ ಉಂಟಾದರೆ ಅಧಿಕಾರಿಗಳನ್ನೇ ನೇರವಾಗಿ ಹೊಣೆ ಮಾಡಿ, ಮುಲಾಜು ಇಲ್ಲದೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಕವಾಡಿಗರ ಹಟ್ಟಿಯಲ್ಲಿ ಮೊದಲೇ ಶುದ್ದ ನೀರಿನ ವ್ಯವಸ್ಥೆ ಇದ್ದಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ. ಘಟನೆ ಬಳಿಕ ಶುದ್ದ ಕುಡಿಯುವ ನೀರಿಗೆ ತೊಂದರೆ ಆಗದಂತೆ ಅಗತ್ಯ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಇಂತಹ ಅನಾಹುತ ನಡೆದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತ ಎಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.