ಬೆಂಗಳೂರು: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ. ಆದರೆ ಇಲ್ಲೊಬ್ಬ ಕಿರಾತಕ ಪತಿಯು ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಕುತ್ತಿಗೆಗೆ ಸೀರೆ ಕಟ್ಟಿ ಫ್ಯಾನಿಗೆ ನೇತಾಕಿದ ಪ್ರಸಂಗವೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ರೇಖಾ ಕೊಲೆಯಾದ ಮೃತ ದುರ್ದೈವಿ. ಆರೋಪಿ ಪತಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಈ ಘಟನೆ ಯಲಹಂಕ ಉಪನಗರ 3 ನೇ ಹಂತದಲ್ಲಿ ನಡೆದಿದೆ.
ರೇಖಾಳನ್ನು ಮನೆಯವರು ಸಂತೋಷ್ಗೆ ಹಣ, ಒಡವೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಸಿಕೊಟ್ಟಿದ್ದರು. ಆದರೆ ಮದುವೆ ಬಳಿಕ ಆಕೆಯ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ. ಸೈಟ್ ತಗೋಬೇಕು ತವರು ಮನೆಯಿಂದ ಹಣ ತರುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ರೇಖಾ ಒಪ್ಪದಿದ್ದಾಗ ಹಲವು ಬಾರಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದ. ವರದಕ್ಷಿಣೆ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಸಂತೋಷ್ ಪತ್ನಿ ರೇಖಾಳನ್ನು ಕೊಲೆ ಮಾಡಿದ ಬಳಿಕ ಸೀರೆಯಿಂದ ಫ್ಯಾನಿಗೆ ನೇಣು ಹಾಕಿ, ಆತ್ಮಹತ್ಯೆ ಅಂತಾ ಬಿಂಬಿಸಿದ್ದ. ಸದ್ಯ ಪತಿ ಸಂತೋಷ್ ನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.