ಹಾಸನ: ನಾವು ಯಾವ ಪಾರ್ಟಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಇವರಿಗೇನು ಹೊಟ್ಟೆ ಉರಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಕಾಂಗ್ರೆಸ್ (Congress) ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ʼನವರು ಜಾತ್ಯಾತೀತ ನಿಲುವಿನ ಬಗ್ಗೆ ಏಷ್ಟೆಲ್ಲಾ ಮಾತನಾಡುತ್ತಾರೆ.ಆದರೆ ಮುಸಲ್ಮಾನರಿಗೆ ಅವರು ನೀಡಿರುವ ಕೊಡುಗೆ ಏನು ಎಂದು ಹೇಳಲಿ? ಮುಸಲ್ಮಾನರಿಗೆ ಮೀಸಲಾತಿ, ರಾಜಕೀಯ ಅಧಿಕಾರ, ಎಲ್ಲಾ ರೀತಿಯ ಸವಲತ್ತು ಕೊಟ್ಟಿರುವುದು ಮಾಜಿ ಪ್ರಧಾನಿ ದೇವೇಗೌಡರು. ಅಲ್ಲದೇ ರಾಜ್ಯದಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟವರು ಅವರು.
ಈ ರಾಷ್ಟ್ರದಲ್ಲಿ ಪ್ರಧಾನಿ ಹುದ್ದೆಯನ್ನೇ ತೊರೆದು ಬಂದ ಯಾವುದಾದರೂ ನಾಯಕ ಇದ್ದರೆ ಅದು ದೇವೇಗೌಡ್ರು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ನವರಿಗೆ ಭಯ ಶುರುವಾಗಿದೆ. ಜನಕ್ಕೆ ಎಷ್ಟು ದಿನ ಸುಳ್ಳು ಹೇಳೋದಕ್ಕೆ ಆಗುತ್ತದೆ. ಇವರಿಗೆ ಮುಸಲ್ಮಾನರ ಬಗ್ಗೆ ಮತಾಡೋಕ್ಕೆ ಯಾವ ನೈತಿಕತೆ ಇದೆ? ಈ ದೇಶದಲ್ಲಿ ಕಾಂಗ್ರೆಸ್ ಈ ಸ್ಥಿತಿಗೆ ಬರಲು ಹಲವಾರು ಕಾರಣಗಳಿವೆ. ಗಾಂಧೀಜಿ ಅವರು ಕಟ್ಟಿದ ಕಾಂಗ್ರೆಸ್ ಆಗಿ ಈಗ ಉಳಿದಿಲ್ಲ. ಒಂದಲ್ಲ ಒಂದು ದಿನ ಮುಸಲ್ಮಾನರು ಕಾಂಗ್ರೆಸ್ನ್ನು ತಿರಸ್ಕಾರ ಮಾಡುವ ದಿನ ಬರುತ್ತದೆ ಎಂದಿದ್ದಾರೆ