ಬೆಂಗಳೂರು: ಶಿವಮೊಗ್ಗದಲ್ಲಿ ಸಣ್ಣ ಗಲಾಟೆ ಆಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ಆಗಿರೋದು ಹೊಸದೇನಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್ ಬೇಜವಾಬ್ದಾರಿಯ ಮಾತುಗಳನ್ನಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ಹಲವರ ಬಂಧನ ಆಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡೋದು ಹೊಸದೇನಲ್ಲ.
ಈ ಹಿಂದೆಯೂ ಆಗಿದೆ, ಈಗಲೂ ಆಗುತ್ತಿದೆ. ಘಟನೆ ನಡೆದು ಹೋಗಿದೆ. ಅದನ್ನು ನಿಯಂತ್ರಿಸಲು ಪೊಲೀಸರು ಸಮರ್ಥರಿದ್ದಾರೆ ಎಂದರು. ಅಂತಹ ಸೂಕ್ಷ್ಮ ಪ್ರದೇಶದಲ್ಲಿ ಮೊದಲೇ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಹೀಗಾಗಿ ದೊಡ್ಡ ಪ್ರಮಾಣದ ಗಲಾಟೆ ನಡೆಯುವುದನ್ನು ತಡೆಯಲಾಗಿದೆ. ಸಣ್ಣ ಪ್ರಮಾಣದ ಗಲಾಟೆ ಆಗಿದೆ. ಅದನ್ನು ಅಧಿಕಾರಿಗಳು ನಿಯಂತ್ರಿಸಿದ್ದಾರೆ ಎಂದು ಹೇಳಿದರು.