ನವದೆಹಲಿ: ಮೊದಲು ಕಾವೇರಿ ನೀರು ಬಿಡುವಾಗ ಯಾರನ್ನ ಕೇಳಿ ಬಿಟ್ಟಿದ್ದೀರಾ? ಆಗ ರಾಜ್ಯದ ಸಂಸದರು ನೆನಪಾಗಲಿಲ್ವಾ? ಜಲಾಶಯದಲ್ಲಿ ನೀರೆಲ್ಲಾ ಖಾಲಿಯಾದ ಮೇಲೆ ನಮ್ಮನ್ನು ಕರೆದರೆ ಏನು ಪ್ರಯೋಜನ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಜೋಶಿ ಅವರು, ” ಇಂಡಿಯಾ ಮೈತ್ರಿಕೂಟ ಗಟ್ಟಿಗೊಳಿಸಲು ತಮಿಳುನಾಡಿಗೆ ನೀರು ಹರಿಸಲಾಗಿದೆ. ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಆಗಬಾರದು ಎಂದು ಸಭೆಯಲ್ಲಿ ಹೇಳಿದ್ದೇನೆ ” ಎಂದು ತಿಳಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ 2,500 ಕ್ಯೂಸೆಕ್ ನೀರು ಬಿಡಲು ಒಪ್ಪಿದ್ದು ಯಾರು? ನಮಗೆ ಕೊಟ್ಟ ಪತ್ರದಲ್ಲಿ ನೀರು ಬಿಡಲು ಆಗುವುದಿಲ್ಲ ಎಂದು ಹೇಳಿ ಪ್ರಾಧಿಕಾರದ ಸಭೆಯಲ್ಲಿ 2,500 ಕ್ಯೂಸೆಕ್ ನೀರು ಬಿಡಲು ಒಪ್ಪಿದ್ದಾರೆ ಎಂದು ಹೇಳಿದರು. ನೀವು ಮೊದಲು ನೀರು ಹರಿಸುವಾಗ ಯಾರನ್ನು ಕೇಳಿದ್ದೀರಾ?, ಆಗ ನಿಮಗೆ ರಾಜ್ಯದ ಸಂಸದರ ನೆನಪಾಗಲಿಲ್ಲವೇ? ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಅಂತ ಸರ್ಕಾರಕ್ಕೆ ಹೇಳಿದ್ದೇನೆ ಎಂದು ಹೇಳಿದರು.