ಳಗಾವಿ: ಮೂರು ಡಿಸಿಎಂ ಹುದ್ದೆ ಸೃಜನೆಯ ವಿಚಾರ ಸರಕಾರ ಹಾಗೂ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದಾಗಿದೆ. ನಾನಂತೂ ಆಕಾಂಕ್ಷಿಯಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಸಚಿವ ರಾಜಣ್ಣ ಅವರ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಪಕ್ಷ ನಿರ್ಧಾರ ಮಾಡಬೇಕು. ಒಂದು ವೇಳೆ ಮಾಡೋದಾದರೆ ಪಕ್ಷ ಯಾರನ್ನು ಮಾಡುತ್ತೋ ಅವರ ಸಾಮರ್ಥ್ಯ ನೋಡಿಯೇ ಮಾಡುತ್ತದೆ,” ಎಂದರು.
ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಬಿಜೆಪಿ ಸೇರುವ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್, ”ರಾಜಕೀಯದಲ್ಲಿಎಲ್ಲಾ ರೀತಿಯ ಚರ್ಚೆಯಾಗುತ್ತದೆ. ಒಂದೊಂದು ಸಲ ಅಂಗಡಿಗೆ ಹೋಗಿ ಬಟ್ಟೆ ಸರಿ ಇದೆಯೋ ಇಲ್ಲವೋ ನೋಡುತ್ತೇವೆ. ಬಟ್ಟೆ ಸರಿ ಇಲ್ಲಎಂದರೆ ಬೇರೆ ಅಂಗಡಿಗೆ ಹೋಗುತ್ತೇವೆ,” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಜಿಲ್ಲಾ ವಿಭಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ”ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತರಿದ್ದೇವೆ. ಇನ್ನು ಮೇಲಿನವರು ಗ್ರೀನ್ ಸಿಗ್ನಲ್ ಕೊಡಬೇಕು,” ಎಂದರು. ಬಿ.ಕೆ. ಹರಿಪ್ರಸಾದ್ ಅವರ ಮನೆಗೆ ಭೇಟಿ ನೀಡಿದ ವಿಚಾರಕ್ಕೆ, ”ಅವರಿಗೆ ಪಕ್ಷ ಬಿಡುವ ವಿಚಾರವಿಲ್ಲ. ಅವರು ಮೂಲ ಕಾಂಗ್ರೆಸ್ಸಿಗರು. ಅವರಿಗೆ ಪಕ್ಷ ನೋಟಿಸ್ ನೀಡಿದ ವಿಚಾರಕ್ಕೆ ಅವರೇ ಉತ್ತರ ನೀಡುತ್ತಾರೆ. ಪಕ್ಷದ ಪರವಾಗಿ ನಾವು ಹೋಗಿ ಮಾತುಕತೆ ಮಾಡಿಕೊಂಡು ಬಂದಿದ್ದೇವೆ,” ಎಂದರು. ಬೆಳಗಾವಿ, ಖಾನಾಪುರ ತಾಲೂಕುಗಳನ್ನು ಬರ ಘೋಷಣೆ ಪಟ್ಟಿಯಿಂದ ಬಿಟ್ಟ ವಿಚಾರಕ್ಕೆ, ”ಅದು ನಮ್ಮ ಕೈಯ್ಯಲ್ಲಿಲ್ಲ. ಕೇಂದ್ರ ಸರಕಾರದ ಮಾನದಂಡ ಇದೆ. ಅದರ ಪ್ರಕಾರ ಆಗಿದೆ,” ಎಂದು ಸತೀಶ್ ಹೇಳಿದರು.