ಬೆಂಗಳೂರು;- ಗೌರಿ ಗಣೇಶ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಪಿಒಪಿ ಗಣೇಶ ಮೂರ್ತಿ ನಿಷೇಧ ಹೇರಲಾಗಿದೆ. ಹೀಗಾಗಿ ಮಣ್ಣಿನ ಗಣಪತಿ ಪೂಜಿಸಿ, ಪರಿಸರ ಸಂರಕ್ಷಿಸುವಂತೆ ಸಚಿವ ಖಂಡ್ರೆ ಮನವಿ ಮಾಡಿದ್ದಾರೆ. ಪರಿಸರದಿಂದ ಹುಟ್ಟಿದ ಗಣಪತಿಗೆ ಶ್ರದ್ಧಾ, ಭಕ್ತಿ ಸಮರ್ಪಿಸಲು, ಪರಿಸರ ಸ್ನೇಹಿಯಾದ ಗಣಪತಿ ಮೂರ್ತಿಗಳ ಪೂಜೆಯೇ ಸೂಕ್ತ ಪದ್ಧತಿ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಜೊತೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಸಚಿವರು, ನಮ್ಮ ಗಣೇಶ ಚತುರ್ಥಿಯ ವ್ರತಕಥೆಯಲ್ಲಿ ಮಣ್ಣಿನ ಗಣೇಶನನ್ನು ಪೂಜಿಸಬೇಕು. ನಂತರ ನೀರಿನಲ್ಲಿ ನಿಮಜ್ಜನೆ ಮಾಡಬೇಕು ಎಂಬ ಉಲ್ಲೇಖವಿದೆ.
ಆದರೆ ಇಂದು ಪಿಒಪಿ ಗಣೇಶ ಮೂರ್ತಿಗಳನ್ನು ಪೂಜಿಸಿ, ನೀರಿನಲ್ಲಿ ನಿಮಜ್ಜನೆ ಮಾಡಿದರೆ, ಅದು ನೀರಲ್ಲಿ ಕರಗದೆ ವಿರೂಪವಾಗುತ್ತದೆ ಜೊತೆಗೆ ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುತ್ತದೆ, ಇದು ಭಗವಂತನಿಗೆ ನಾವು ಮಾಡಿದ ಅಪಚಾರವೂ ಆಗುತ್ತದೆ. ಹೀಗಾಗಿ ಪಿಒಪಿ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ತ್ಯಜಿಸಿ, ಪರಿಸರ ಸ್ನೇಹಿ ಗಣಪತಿಯನ್ನು ಪೂಜಿಸುವಂತೆ ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ನಾಡಿನ ಜನತೆಗೆ ಮನವಿ ಮಾಡಿದರು.