ಏಷ್ಯಾಕಪ್ ಫೈನಲ್ಗೆ ಶ್ರೀಲಂಕಾ ಲಗ್ಗೆಯಿಟ್ಟಿದೆ. ‘ಸೆಮಿಫೈನಲ್’ನಂತಿದ್ದ ಸೂಪರ್-4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಡಕ್ವರ್ತ್ ಲೂಯಿಸ್ ನಿಯಮದನ್ವಯ 2 ವಿಕೆಟ್ ರೋಚಕ ಗೆಲುವು ಸಾಧಿಸಿದ ಲಂಕಾ, 11ನೇ ಬಾರಿಗೆ ಫೈನಲ್ ಪ್ರವೇಶಿಸಿತು. ಭಾನುವಾರ ಪ್ರಶಸ್ತಿಗಾಗಿ ಭಾರತ ಹಾಗೂ ಲಂಕಾ ಮುಖಾಮುಖಿಯಾಗಲಿವೆ.ಮಳೆಯಿಂದಾಗಿ 2 ಗಂಟೆ 15 ನಿಮಿಷಗಳ ಕಾಲ ತಡವಾಗಿ ಆರಂಭಗೊಂಡ ಪಂದ್ಯವನ್ನು ತಲಾ 45 ಓವರ್ಗೆ ಸೀಮಿತಗೊಳಿಸಲಾಯಿತು. ಆ ಬಳಿಕ ಮತ್ತೆ ಮಳೆ ಅಡ್ಡಿಪಡಿಸಿದ ಪರಿಣಾಮ, ಪಂದ್ಯವನ್ನು ತಲಾ 42 ಓವರ್ಗೆ ಕಡಿತಗೊಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ಮೊಹಮದ್ ರಿಜ್ವಾನ್ ಹಾಗೂ ಅಬ್ದುಲ್ಲಾ ಶಫೀಕ್ರ ಆಕರ್ಷಕ ಅರ್ಧಶತಕಗಳ ನೆರವಿನಿಂದ ನಿಗದಿತ ಓವರ್ಗಳಲ್ಲಿ 7 ವಿಕೆಟ್ಗೆ 252 ರನ್ ಕಲೆಹಾಕಿತು.
ಲಂಕಾಕ್ಕೆ ಡಕ್ವರ್ತ್ ನಿಯಮದನ್ವಯ 42 ಓವರಲ್ಲಿ 252 ರನ್ಗಳನ್ನೇ ಗುರಿಯಾಗಿ ನೀಡಲಾಯಿತು. ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಲು ಇಳಿದ ಲಂಕಾಕ್ಕೆ ಕುಸಾಲ್ ಮೆಂಡಿಸ್, ಸಮರವಿಕ್ರಮ ನಡುವಿನ ಶತಕದ ಜೊತೆಯಾಟ ನೆರವಾಯಿತು. ಸಮರವಿಕ್ರಮ 48 ರನ್ ಗಳಿಸಿ ಔಟಾದರೆ, ಮೆಂಡಿಸ್ 87 ಎಸೆತದಲ್ಲಿ 91 ರನ್ ಸಿಡಿಸಿ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು.ಒಂದೆಡೆ ಲಂಕಾ ಅಗತ್ಯ ರನ್ರೇಟ್ ತನ್ನ ಕೈ ಮೀರಿ ಹೋಗದಂತೆ ಎಚ್ಚರ ವಹಿಸಿದರೂ, ಪಾಕಿಸ್ತಾನ ತನ್ನ ಮೊನಚಾದ ಬೌಲಿಂಗ್ ಹಾಗೂ ಆಕರ್ಷಕ ಫೀಲ್ಡಿಂಗ್ನಿಂದ ಪಂದ್ಯವನ್ನು ಕೊನೆ ಓವರ್ ವರೆಗೂ ಕೊಂಡೊಯ್ದಿತು. ಕೊನೆಯ ಓವರಲ್ಲಿ ಲಂಕಾಕ್ಕೆ ಗೆಲ್ಲಲು 8 ರನ್ ಬೇಕಿತ್ತು. ಅಸಲಂಕ ತಂಡವನ್ನು ಜಯದ ದಡ ಸೇರಿಸಿದರು.