ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರ ದೇಶದ ರೈತರಿಗೆ ಸುಳ್ಳು ಭರವಸೆಗಳನ್ನು ನೀಡಿದೆ ಎಂದು ಆರೋಪಿಸಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಮೋದಿ ಸರ್ಕಾರ ದೇಶದ ರೈತರಿಗೆ ಎರಡು ಭರವಸೆಗಳನ್ನು ನೀಡಿತ್ತು.
ಕನಿಷ್ಠ ಬೆಂಬಲ ಬೆಲೆಯನ್ನು ‘ವೆಚ್ಚ + 50 ಪ್ರತಿಶತ ಲಾಭ’ಕ್ಕೆ ನಿಗದಿಪಡಿಸುವುದು ಮತ್ತು 2022ರ ವೇಳೆಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವುದು. ಇದೀಗ ಈ ಎರಡೂ ಭರವಸೆಗಳು ಸುಳ್ಳಾಗಿವೆ’ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಬುಧವಾರ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಏರಿಕೆ ಮಾಡಲು ಅನುಮತಿ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಖರ್ಗೆ, ‘ಪಿಆರ್ ಹಸಿವಿನಿಂದ ಕಂಗೆಟ್ಟಿರುವ ಮೋದಿ ಸರ್ಕಾರವು ಖಾರಿಫ್ ಬೆಳೆಗೆ ಎಂಎಸ್‌ಪಿ ಹೆಚ್ಚಿಸುತ್ತೇವೆ ಎಂದು ಬಿಂಬಿಸಿದೆ. ಆದರೆ, ಎಂಎಸ್‌ಪಿ ದರದಲ್ಲಿ ರೈತರಿಂದ ಬೆಳೆಗಳನ್ನು ಖರೀದಿಸುತ್ತಿಲ್ಲ. ಕೃಷಿಗೆ ಬಜೆಟ್ ಕಡಿತಗೊಳಿಸಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.