ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸತತ ಎರಡು ತಿಂಗಳಿಂದ ವರ್ಗಾವಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಅವಧಿಯಲ್ಲಿ ಕಾಸಿಗಾಗಿ ಹುದ್ದೆ ವ್ಯವಹಾರದಲ್ಲಿ 500 ಕೋಟಿ ರೂಪಾಯಿಗೂ ಮೀರಿ ಕೈ ಬದಲಾಗಿದೆನಡೆದಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ವರ್ಗಾವರ್ಗಿ ದಂಧೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಬಗ್ಗೆ ನನಗೆ ಮಾಹಿತಿ ಇದೆ. ಆ ಬಗ್ಗೆ ಎಲ್ಲಾ ಕಡೆ ಚರ್ಚೆ ಆಗುತ್ತಿದೆ ಎಂದರು. ಕರ್ನಾಟಕ ಸಮೃದ್ಧವಾಗಿದೆ. ಜನ ಪ್ರಾಮಾಣಿಕವಾಗಿ ತೆರಿಗೆ ಕಟ್ಟಿ ಖಜಾನೆ ತುಂಬಿಸುತ್ತಿದ್ದಾರೆ. ಎಲ್ಲಾ ಮೇವು ಸಮೃದ್ಧವಾಗಿದೆ. ಇಲ್ಲಿ ಚೆನ್ನಾಗಿ, ಪೊಗದಸ್ತಾಗಿ ಮೇಯುತ್ತಿದ್ದಾರೆ. ಆ ಮೇವನ್ನು ಇಡೀ ದೇಶಕ್ಕೆಲ್ಲ ಹಂಚಲು ಹೊರಟಿದ್ದಾರೆ. ಇದೇನಾ ಕರ್ನಾಟಕದ ಮಾದರಿ ಎಂದರೆ? ಇದೇನಾ ಹೊಸ ಭರವಸೆ, ಹೊಸ ಕನಸು? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಈಗ ನಡೆಯುತ್ತಿರುವ ಯೋಜನೆಗಳ ಕಾಮಗಾರಿಗಳ ಒಟ್ಟು ಅಂದಾಜು ವೆಚ್ಚವನ್ನು 20-30%ಗೆ ಹೆಚ್ಚಳ ಮಾಡಿಕೊಳ್ಳಲಾಗುತ್ತಿದೆ. ಕಮಿಷನ್ ಹೊಡೆಯೋದಕ್ಕೆ ಏನು ಬೇಕೋ ಅದನ್ನು ಮಾಡಿಕೊಳ್ಳುತ್ತಿದ್ದಾರೆ. ಸಚಿವರೊಬ್ಬರು ಒಂದು ಪತ್ರಿಕೆಯ ಕಟಿಂಗ್ ಇಟ್ಟುಕೊಂಡು ಎಲ್ಲೆಲ್ಲಿ ರೇಟ್ ಫಿಕ್ಸ್ ಆಗಿದೆ ಅಂತ ಹೇಳಿದರು. ನಾನು ಆ ಕಟಿಂಗ್ ನಲ್ಲಿರುವ ಸುದ್ದಿ ಯಾವುದು ಎಂದು ಪತ್ತೆ ಹಚ್ಚಿದೆ. ತೀರಾ ನೀಡಿದ ಮೇಲೆ ಅದು 2013ರಿಂದ 2018ರವರೆಗೆ ನಡೆದಿರುವ ವರ್ಗಾವಣೆ ದಂಧೆಗೆ ಸಂಬಂಧಿಸಿದ ಸುದ್ದಿ. “ಮುಖ್ಯ ಎಂಜಿನಿಯರ್ ಹುದ್ದೆಗೆ 30 ಕೋಟಿ ಕಪ್ಪಾ” ಎನ್ನುವ ಸುದ್ದಿಯ ಕಟಿಂಗ್ ಅದು. ಅದು ರೇವಣ್ಣ ಅವರದ್ದಾಗಲಿ, ನನ್ನ ಕಾಲದ್ದಾಗಲಿ ಆಗಿರಲಿಲ್ಲ ಎಂದು ಟಾಂಗ್ ನೀಡಿದರು ಮಾಜಿ ಮುಖ್ಯಮಂತ್ರಿಗಳು.