ತಿರುವನಂತಪುರಂ: ಕೇರಳದಲ್ಲಿ ಪಾದ್ರಿ ಸೇರಿ 50 ಕ್ರಿಶ್ಚಿಯನ್ ಕುಟುಂಬಗಳು (Christian family) 2023ರ ಡಿಸೆಂಬರ್ 30ರಂದು ಬಿಜೆಪಿಗೆ ಸೇರ್ಪಡೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಅಲ್ಲಿನ ಬಿಜೆಪಿ (BJP) ಘಟಕವು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಕೇಂದ್ರ ಸಚಿವ ವಿ. ಮುರಳೀಧರನ್ ಅವರ ನೇತೃತ್ವದಲ್ಲಿ ಕೇರಳದ ಪತ್ತನಂತಿಟ್ಟ ಜಿಲ್ಲೆ ನೀಲಕ್ಕಲ್ ಭದ್ರಾಸನಂನ ಆರ್ಥೋಡಾಕ್ಸ್ ಚರ್ಚ್ ಕಾರ್ಯದರ್ಶಿ ಫಾಧರ್ ಶೈಜು ಕುರಿಯನ್ ಸೇರಿ ಸುಮಾರು 50 ಕುಟುಂಬಗಳು ಕಮಲ ಪಳಯ ಸೇರಿಕೊಂಡಿವೆ ಎನ್ನಲಾಗಿದೆ.
ಕೇರಳದಲ್ಲಿ ಕ್ರಿಶ್ಚಿಯನ್ನರ ವಿಶ್ವಾಸ ಗಳಿಸಲು ಬಿಜೆಪಿ ಸ್ನೇಹಯಾತ್ರೆ ಕಾರ್ಯಕ್ರಮ ಆಯೋಜಿಸುವಂತೆ ಬಿಜೆಪಿ ಸೇರ್ಪಡೆಯಾದವರು ತಿಳಿಸಿದ್ದಾರೆ. ಇನ್ನು ಕ್ರಿಶ್ಚಿಯನ್ ಕುಟುಂಬಗಳು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಗಳು ಬಂದಿವೆ. ಕಾಂಗ್ರೆಸ್ ಹಾಗೂ ಸಿಪಿಎಂ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಜೊತೆಗೆ ಹೀಗೆ ಮುಂದುವರಿಸಿದರೆ ತಕ್ಕ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂಬುದಾಗಿಯೂ ಬಿಜೆಪಿ ಎಚ್ಚರಿಕೆ ನೀಡಿದೆ.