ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದಿದ್ದು, ಶತಕದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಸಚಿವರಿಗೆ ಹೊಸ ಕಾರಿನ ಭಾಗ್ಯವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಹೌದು ಹೊಸ ಕಾರುಗಳನ್ನು ಖರೀದಿಸಲು ಕರ್ನಾಟಕ ಸರ್ಕಾರ 9.9 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಎಲ್ಲಾ 33 ಸಚಿವರು ಶೀಘ್ರದಲ್ಲೇ ಅತ್ಯಾಧುನಿಕ ಕಾರುಗಳನ್ನು ಪಡೆಯಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೊಯೊಟಾ ಇನ್ನೋವಾ ಹೈಬ್ರಿಡ್ ಹೈಕ್ರಾಸ್ ಮಾಡೆಲ್ನ 33 ಕಾರುಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ. ಪ್ರತಿ ಸಚಿವರಿಗೆ ಒಂದರಂತೆ ಕಾರು ಖರೀದಿಸಲಾಗುತ್ತದೆ. ಸರ್ಕಾರ ಬಿಡುಗಡೆ ಮಾಡಿರುವ ಆದೇಶದ ಪ್ರಕಾರ ಪ್ರತಿ ಕಾರಿಗೆ ಸುಮಾರು 30 ಲಕ್ಷ ರೂಪಾಯಿ (ಜಿಎಸ್ಟಿ ಸೇರಿದಂತೆ ಎಕ್ಸ್ ಶೋರೂಂ ದರ) ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಸೆಕ್ಷನ್ 4 (ಜಿ) ಅಡಿಯಲ್ಲಿ ಸರ್ಕಾರವು ನೇರವಾಗಿ ಟೊಯೊಟಾ ಕಿರ್ಲೋಸ್ಕರ್ ಬೆಂಗಳೂರು ಘಟಕದಿಂದ ಕಾರುಗಳನ್ನು ಖರೀದಿಸುತ್ತಿದೆ. ಈ ಕಾರುಗಳು ಆಗಸ್ಟ್ 29 ರಂದು ಬಿಡುಗಡೆಯಾದ ವಿಶ್ವದ ಮೊದಲ ಸಂಪೂರ್ಣ ಎಥೆನಾಲ್ ಚಾಲಿತ ಫ್ಲೆಕ್ಸ್ ಇಂಧನ ಎಂಜಿನ್ ಹೊಂದಿವೆ. ಕಾರ್ಗಳನ್ನು ಟೊಯೋಟಾ ಕಿರ್ಲೋಸ್ಕರ್ ಪ್ರೈವೇಟ್ ಲಿಮಿಟೆಡ್ನಿಂದ ನೇರವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಕಾಯಿದೆ 1999 ರ ಷರತ್ತಿನ ಅಡಿಯಲ್ಲಿ ಜಿಎಸ್ಟಿ ಸೇರಿದಂತೆ ಎಕ್ಸ್ ಶೋ ರೂಂ ದರದಲ್ಲಿ ಖರೀದಿಸಲಾಗುತ್ತದೆ.