ಶಿವಮೊಗ್ಗ: ರಾಜ್ಯ ಸರ್ಕಾರ ಗ್ಯಾರಂಟಿ ಕಾರ್ಯಕ್ರಮ ಮೂಲಕ ಬಡವರ ಜೇಬಿಗೆ ಕನ್ನ ಹಾಕುತ್ತಿದೆ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ. ಅಘೋಷಿತ ಲೋಡ್ ಶೆಡ್ಡಿಂಗ್ ಆರಂಭಗೊಂಡಿದೆ. ರೈತರು ಬೇಸತ್ತಿದ್ದಾರೆ, ಬೆಳೆ ಉಳಿಸಿಕೊಳ್ಳಲೂ ವಿದ್ಯುತ್ ಸಿಗುತ್ತಿಲ್ಲ. ಅಕ್ಕಪಕ್ಕದ ರಾಜ್ಯದಿಂದ ವಿದ್ಯುತ್ ಖರೀದಿಸಿ ಕೊಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ನೆಟ್ ವರ್ಕ್ʼಗಾಗಿ 300 ಕೋಟಿ ಅನುದಾನ ನೀಡಿದೆ.
ಮಲೆನಾಡು ಭಾಗದಲ್ಲಿ ಆದ್ಯತೆ ನೀಡಲಾಗುತ್ತಿದೆ. ಡಿಸೆಂಬರ್ ಒಳಗಾಗಿ 100 ಟವರ್ ಸ್ಥಾಪನೆ ಆಗಲಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲ ಕಡೆ ಟವರ್ ನಿರ್ಮಿಸಲಾಗುವುದು. ಶಿವಮೊಗ್ಗ ಕ್ಷೇತ್ರದ ಟವರ್ ಗಳಿಗೆ 100 ಬ್ಯಾಟರಿ ಮಂಜೂರಾಗಿದೆ. ಇದರಿಂದ ಜನರೇಟರ್ ಅವಲಂಬನೆಗೆ ಮುಕ್ತಿ ಸಿಗಲಿದೆ. ರೈತ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ಏತ ನೀರಾವರಿ ಮಾಡಿದ್ದೇವೆ. ಶಿಕಾರಿಪುರ ತಾಲ್ಲೂಕಿನಲ್ಲಿ ಈ ಯೋಜನೆ ಪೂರ್ಣಗೊಂಡಿದೆ.
ಈ ಯೋಜನೆಗಳಿಗೆ 24 ಗಂಟೆ ವಿದ್ಯುತ್ ಪೂರೈಸಿದರೆ ಕೆರೆಗಳಿಗೆ ನೀರು ಸಿಗಲಿದೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ತಜ್ಞರಿಂದ ಅಭಿಪ್ರಾಯ ಪಡೆದು ಹೊಸ ಶಿಕ್ಷಣ ನೀತಿ ಆರಂಭಿಸಿದೆ. ಆದರೆ, ರಾಜ್ಯ ಸರ್ಕಾರ ಅದನ್ನು ಕೈಬಿಟ್ಟು ಪ್ರತ್ಯೇಕ ಶಿಕ್ಷಣ ನೀತಿ ಅಳವಡಿಸುತ್ತಿದೆ. ಇದರಿಂದ ಸರ್ಕಾರಿ ಮಕ್ಕಳಿಗೆ ಅನ್ಯಾಯ ಆಗುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳು ತೊಂದರೆ ಅನುಭವಿಸುತ್ತಾರೆ ಎಂದರು.