ಸಿನಿಮಾ ರಂಗದ ಖ್ಯಾತ ನಟ ಕಮಲ್ ಹಾಸನ್ (Kamal Haasan) ಮಾಜಿ ಪ್ರೇಯಸಿ, ನಟಿ ಗೌತಮ್ (Gauthami) ತಮಗೆ ಕಂಪನಿಯೊಂದರಿಂದ ತಮಗೆ 25 ಕೋಟಿ ರೂಪಾಯಿ ಮೋಸವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಅಳಗಪ್ಪನ್ ಕಂಪನಿಯ ಮುಖ್ಯಸ್ಥರಿಂದ ತಮಗೆ ದೋಖಾವಾಗಿದ್ದು, ತಮಗೆ ನ್ಯಾಯ ಕೊಡಿಸಬೇಕೆಂದು ಅವರು ಚೆನ್ನೈ ಸಿಟಿ ಪೊಲೀಸ್ ಕಮಿಷ್ನರ್ ಗೆ ದೂರು ಸಲ್ಲಿಸಿದ್ದಾರೆ.
ಶ್ರೀಪರೆಂಬುದುರ್ ನಲ್ಲಿ ನಟಿ ಗೌತಮಿ ಅವರಿಗೆ ಸೇರಿದ್ದ 46 ಎಕರೆ ಜಮೀನು ಇದೆ. ಅದನ್ನು ಮಾರಾಟ ಮಾಡಲು ಅಳಗಪ್ಪನ್ ಕಂಪನಿಗೆ ಪವರ್ ಆಫ್ ಅಟಾರ್ನಿ ನೀಡಿದ್ದರಂತೆ. ಇದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಗೌತಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ತಮ್ಮ ಕೃಷಿ ಭೂಮಿಯನ್ನು ನಾಲ್ಕು ಕೋಟಿ ರೂಪಾಯಿಗೆ ಮಾರಾಟ ಮಾಡಿದರೂ ಕಂಪನಿ ತಮಗೆ ಕೇವಲ 62 ಲಕ್ಷ ರೂಪಾಯಿಯನ್ನು ಮಾತ್ರ ನೀಡಿದೆ ಎಂದು ಅವರು ದೂರಿದ್ದಾರೆ.
ಹಣದ ಮೋಸ (Cheating) ಮಾಡುವುದರ ಜೊತೆಗೆ ತಮ್ಮ ಸಹಿ ಕೂಡ ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸಿರುವ ಗೌತಮಿ, ತಮಗಾದ ಅನ್ಯಾಯವನ್ನು ಪ್ರಶ್ನಿಸಿದರೆ, ಕಂಪನಿಯವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ತಾವು ಕಷ್ಟಪಟ್ಟು ಸಂಪಾದನೆ ಮಾಡಿರುವ ಆಸ್ತಿಯದು. ಇದೀಗ ಅನಿವಾರ್ಯ ಕಾರಣಗಳಿಂದ ಮಾರಾಟಕ್ಕೆ ಮುಂದಾಗಿದ್ದೆ. ಆದರೆ, ಈ ರೀತಿ ಮೋಸವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ